Home
ಶಾಲಾ, ಕಾಲೇಜು ಮಕ್ಕಳಿಗೆ ಉಪ್ಪಿನ್ “ಹಿಜಾಬು-ಕೇಸರಿ” ಕಾವ್ಯ ಮನವಿ
ಹಿಜಾಬು-ಕೇಸರಿ
ಶಾಲಾ ಮಕ್ಕಳಿಗೆ ಉಪ್ಪಿನ್ ಕಾವ್ಯ ಮನವಿ
ಹಿಜಾಬು, ಕೇಸರಿ ಹಾರಿ
ಹೋಗಲಿ
ಧರ್ಮಗಳೆಲ್ಲ ಗಾಳಿಗೆ ತೂರಿ ತೊಲಗಲಿ!
ಮಕ್ಕಳ ಕಣ್ಣಲಿನ
ಒಲವ ದೀಪಕೆ ವಿಷದ
ಬಳ್ಳಿ.
ಶಾಲೆ ಎಂಬ ದೇಗುಲಲ್ಲಿ
ಧರ್ಮದ ಕೊಳ್ಳಿ!
ಕಾಯಿಸಿಕೊಂಡು ಕಾಳು
ತಿನ್ನುವವರ ಬಾಯಿಗೆ ಬೀಳಲಿ ಮಣ್ಣು.
ತಲೆಗೆ ಕಟ್ಟಿದರೇನ,
ಕುಂಕುಮ ಇಟ್ಟರೇನ?
ಬಳೆಗಳ ಸಪ್ಪಳಕೆ
ಹೆದರಿತೇನ ಧರ್ಮ?!
ರಮ್ಝಾನಿನ ಹೊತ್ತಲಿ
ಗೆಳತಿ ಕೊಟ್ಟ ಖಜೂರಿ
ಹಿಜಾಬು ಮರೆಸಿತೇ ಕೂಸೆ..
ಅವಳ ಘಮ್ಮನೆ ಮನೆಯ ಸುರ್ಕುರ್ಮಾ
ಕುಡಿದದ್ದು ಕೇಸರಿ ಕರಗಸಿತೇ ಮಗಳೇ?
ಎದೆಯೊಳಗೆ ಬೀಳುವ
ಅಕ್ಷರಕ್ಕಿಂತ ಧರ್ಮ ದೊಡ್ಡದೇ ತಾಯಿ?
ಮುತ್ತ್ಯಾ ನೆಟ್ಟಾನಂತ
ಹಳೀ ಗಿಡಕ್ಕ ಉರುಳು
ಹಾಕ್ಕೋಳಾದೇನ ಮಕ್ಕಳಾ?
ಧರ್ಮ ಕೂಡಾಕ ಐತಿ,
ಕಳೆಯಾಕಲ್ಲ.
ಕಳೆದುಕೊಂಡು ಬೆತ್ತಲಾಗೀವಿ,
ಅದರೂ ಬಟ್ಟೆ ಬೇಕು
ಧರ್ಮದ ಒಣ ಧಿಮಾಕಿಗೆ!
ಶಾಲೆಗಳು ಕೊಳಕಾಗದಿರಲಿ,
ಬಣ್ಣಗಳ ಭ್ರಮೆಗಳಲಿ.
ಹತ್ತದಿರಲಿ ಛತ್ತಿಗೆ ಬೆಂಕಿ
ಧರ್ಮದ ಹೊಗೆ ಅಮಲಿನಲಿ.
ಮಕ್ಕಳು ಮಲ್ಲಿಗೆಯಾಗೇ
ಇರಲಿ.
ಮನೆಗೆ ಮಾವು ತರಲಿ,
ಬೇವು ಅಲ್ಲ!
-ಶಿವಕುಮಾರ್ ಉಪ್ಪಿನ್
ಪತ್ರಕರ್ತ, ಬಿಜಾಪುರ.