ವಡಿಗೇರಿಃ ಮುಂಗಾರು ಬಿತ್ತನೆ ಆರಂಭ
ತೊಗರಿ ಬಿತ್ತನೆಗೆ ಹಿಂದೇಟು ಹತ್ತಿ ಬೆಳೆಗೆ ರೈತರ ಒತ್ತು
ವಡಿಗೇರಿಃ ಯಾದಗಿರಿ ಜಿಲ್ಲೆಯ ವಡಿಗೇರಿ ತಾಲೂಕು ವ್ಯಾಪ್ತಿಯ ರೈತರು ಮುಂಗಾರು ಬಿತ್ತನೆಗೆ ಮುಂದಾಗಿದ್ದು, ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ರೈತರು ವಾಣಿಜ್ಯ ಬೆಳೆಯಾದ ಹತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಪ್ರತಿ ವರ್ಷ ಮುಂಗಾರು ಬಿತ್ತನೆಯಲ್ಲಿ ಹೆಸರು, ಸೇಂಗಾ, ಸಜ್ಜೆ ಸೇರಿದಂತೆ ವಾಣಿಜ್ಯ ಬೆಳೆ ತೊಗರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತಿದ್ದರು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ತಾಲೂಕಿನಾದ್ಯಂತ ರೈತರು ಹತ್ತಿ ಬಿತ್ತನೆಗೆ ಒಲವನ್ನು ತೋರುತ್ತಿರುವದು ಕಂಡು ಬಂದಿದೆ.
ಕಾರಣ ಪ್ರತಿ ಎಕರೆಗೆ ಹತ್ತಿ ಬೆಳೆಯಲ್ಲಿ ಹೆಚ್ಚಿನ ಇಳುವರಿ ಕಂಡು ಬಂದಿದ್ದು ರೈತರು ಹತ್ತಿ ಬೆಳೆಗೆ ಒತ್ತು ನೀಡುತ್ತಿದ್ದಾರೆ.
ಕಳೆದ ವರ್ಷ ಜೂನ್ ಅಂತ್ಯದವರೆಗೆ ಸುಮಾರು 84 ಮಿಮೀ ವಾಡಿಕೆ ಮಳೆಯಾಗಿತ್ತು. ಆದರೆ ಈ ವರ್ಷ ಜೂನ್ 20ರವರಗೆ 148 ಮಿಮೀ ಮಳೆ ಆಗಿದೆ. ಆದರೂ ಸಹ ರೈತರು 45 ದಿನಗಳಿಂದ 2 ತಿಂಗಳ ಒಳಗಾಗಿ ಬರುವ ಬೆಳೆಯಾದ ಹೆಸರು ಬೆಳೆ ಹಾಗೂ 6 ತಿಂಗಳಿಗೆ ಬರುವ ತೊಗರಿ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಸಕಾಲದಲ್ಲಿ ಮಳೆಯಾಗದಿರುವುದು ಹಾಗೂ ಕೂಲಿ ಕಾರ್ಮಿಕರ ಕೊರತೆ ಇದಕ್ಕೆ ಮೂಲ ಕಾರಣ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಈ ಭಾಗದಲ್ಲಿ ಕಪ್ಪು ಜಮೀನು ಹೆಚ್ಚಿಗೆ ಇರುವುದರಿಂದ ಹೆಸರು ಹಾಗೂ ತೊಗರಿ ಬಿತ್ತನೆ ಮಾಡಿದರೆ ಎಕರೆಗೆ ಸುಮಾರು 6 ರಿಂದ 7 ಕ್ವಿಂಟಾಲ್ ಇಳುವರಿ ಬರುತ್ತದೆ. ಅದೇ ಈ ಭೂಮಿಯಲ್ಲಿ ಹತ್ತಿ ಬಿತ್ತನೆ ಮಾಡಿದರೆ ಎಕರೆಗೆ ಕನಿಷ್ಠ 10 ಹಾಗೂ ಗರಿಷ್ಠ 15 ಕ್ವಿಂಟಾಲ್ ಇಳುವರಿ ಬರುತ್ತದೆ. ಅಲ್ಲದೇ ಕಳೆದ ವರ್ಷ ಪ್ರತಿ ಕ್ವಿಂಟಾಲ್ ಹತ್ತಿಗೆ 4800 ರೂ. ಗಳಿಂದ 5200 ರೂಗಳವರೆಗೆ ಬೆಲೆ ಸಿಕ್ಕಿತ್ತು. ಇದರಿಂದ ನಾವುಗಳು ಆರ್ಥಿಕವಾಗಿ ಹೆಚ್ಚು ಲಾಭ ಬರುವ ಬೆಳೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂಬುವುದು ರೈತರ ಅಭಿಪ್ರಾಯವಾಗಿದೆ.
ಕಳೆದ ವರ್ಷ ಹತ್ತಿ ಬಿತ್ತನೆ ಮಾಡಿದ ರೈತರಿಗೆ ಉತ್ತಮ ಇಳುವರಿ ಬಂದಿದ್ದು ಹಾಗೂ ಸರಿಯಾದ ಬೆಲೆ ಸಿಕ್ಕಿದ್ದರಿಂದ ಈ ವರ್ಷ ಹತ್ತಿ ಬಿತ್ತನೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ.
-ಶರಣಪ್ಪ ಜಡಿ ರೈತ
2019-20ನೇ ಸಾಲಿನಲ್ಲಿ ಹತ್ತಿ 16538 ಹೆಕ್ಟರ್ ಬಿತ್ತನೆ ಗುರಿ ಇತ್ತು 20080ಹೆಕ್ಟರ್ ಬಿತ್ತನೆ ಆಗಿತ್ತು. 2020-21ನೇ ಸಾಲಿನಲ್ಲಿ 17000 ಹೆಕ್ಟರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಂತೆ ಈಗಾಗಲೇ ಬಿತ್ತನೆ ಆರಂಭವಾಗಿದ್ದು ಪ್ರಾಥಮಿಕ ಸಮೀಕ್ಷೆ ಪ್ರಕಾರ 8520 ಹೆಕ್ಟರ್ ಹತ್ತಿ ಬಿತ್ತನೆ ಮಾಡಲಾಗಿದೆ. ಇನ್ನೂ ಬಿತ್ತನೆ ಬಾಕಿ ಉಳಿದಿದ್ದು ಈ ವರ್ಷ ಗರಿಷ್ಠ ಪ್ರಮಾಣದಲ್ಲಿ ಹತ್ತಿ ಬಿತ್ತನೆಯಾಗುವ ನಿರೀಕ್ಷೆ ಇದೆ.
-ಡಾ. ಜಗದೀಶ ಗಾಯಕವಾಡ
ವಡಗೇರಾ ಕೃಷಿ ಕೇಂದ್ರದ ಅಧಿಕಾರಿ