ಅತ್ಯಾಚಾರ ತಡೆಯಲು ‘ಹೀಗೊಂದು ಕಾರ್ಯಾಚರಣೆ’ ಮಾಡಬಹುದೇ?
ಅತ್ಯಾಚಾರ ತಡೆಯಲು ‘ಹೀಗೊಂದು ಕಾರ್ಯಾಚರಣೆ’ ಮಾಡಬಹುದೇ?
ಒಂದು ಬಿನ್ನಹ; ಇದು ಸರಿಯೋ ತಪ್ಪೋ ಗೊತ್ತಿಲ್ಲ..
ರಾಕ್ಷಸರ ಅತ್ಯಾಚಾರ, ಅಸಭ್ಯ ನಡೆ ತಡೆಯಲು ಅಪರಾತ್ರಿಗಳಲಿ ಪೊಲೀಸರು ‘ಸ್ಟಿಂಗ್ ಆಪರೇಷನ್’ ಮಾಡಬೇಕು. ಹೊತ್ತಲ್ಲದ ಹೊತ್ತಲ್ಲಿ ನಿರ್ಜನ ಪ್ರದೇಶ, ಇಂತಹ ಸಂಶಯದ ಜಾಗಗಳಲ್ಲಿ ತರಬೇತುದಾರ ಹುಡುಗ-ಹುಡುಗಿಯರನ್ನು ಬಿಟ್ಟು ದೂರದಲ್ಲಿ ಕಾದು ಕುಳಿತುಕೊಳ್ಳಬೇಕು.
ಮಹಿಳಾ ಸಿಬ್ಬಂದಿಯನ್ನು ಕೂಡ ಇದಕ್ಕೆ ಬಳಸಿಕೊಳ್ಳಬಹುದು. ಸಾರ್ವಜನಿಕ ಸ್ಥಳಗಳ ಆಜುಬಾಜು, ಹೆಚ್ಚು ಜನ ತಿರುಗಾಡದ ಹೊರ ವಲಯಗಳಲ್ಲಿ ಬೇಕಾಬಿಟ್ಟಿ ತಿರುಗೋ ಕಾಮುಕರಿಗೇನು ಕೊರತೆ ಇರಲ್ಲ. ಇಂತಹ ಕಡೆ ಕಾರ್ಯಾಚರಣೆಗೆ ಇಳಿಯಬೇಕು.
ಇದು ತಂತ್ರಜ್ಞಾನದ ಜಿಪಿಎಸ್ ಯುಗ. ಹಾಗೆ ಹೋದ ಸ್ಥಳದಲ್ಲಿ ಅಸಭ್ಯತೆಗೆ ಗುರಿಯಾಗುವ ಲಕ್ಷಣ ಕಂಡರೆ, ದುರ್ನಡತೆಯಿಂದ ವರ್ತಿಸಿದರೆ, ಛೇಡಿಸಿದರೆ ಹುಡುಗಿ ಅಥವಾ ಜತೆಗಿರುವ ಹುಡುಗನಿಂದ ತಕ್ಷಣ ಆಜುಬಾಜು ಮರೆಯಲ್ಲಿ ಇರುವ ತಂಡಕ್ಕೆ ಸಂದೇಶ ರವಾನೆಯಾಗಬೇಕು. ದಿಢೀರ್ ದಾಳಿ ನಡೆಸಿ ಅಲ್ಲಿರುವ ಕಾಮ ಪಿಪಾಸುಗಳ ಹೆಡೆಮುರಿ ಕಟ್ಟಿ ಒದೆಯಬೇಕು. ಕೆಲವರು ಓಡಿ ಹೋದರೂ ಒಬ್ಬಿಬ್ಬರಾದರೂ ಸಿಕ್ಕೇ ಸಿಗುತ್ತಾರೆ.
ಅವರಿಂದ ಉಳಿದವರ ಪತ್ತೆಯಾಗುತ್ತೆ. ಹಾಗೆ ಸಿಕ್ಕವರನ್ನು ಬೀದಿಯಲಿ ಮೆರವಣಿಗೆ ಮಾಡಿ, ಜೈಲಿಗಟ್ಟಬೇಕು. ಹೀಗೆ ಒಂದ್ನಾಲ್ಕು ಪ್ರಕರಣಗಳು ಎಲ್ಲೆಡೆ ಆಗಿ ಪ್ರಚಾರ ಪಡೆದರೆ ಇಂತಹ ಅಮಾನುಷ ಕೃತ್ಯಗಳಿಗೆ ಒಂದಿಷ್ಟಾದರೂ ಕಡಿವಾಣ ಬೀಳಬಹುದು ಅನ್ನೋದು ನನ್ನ ಸಣ್ಣ ಆಸೆ, ಯೋಚನೆ.
ಇದಕ್ಕೆ ಮಾಧ್ಯಮದವರ ಸಹಕಾರ ಪಡೆಯಬೇಕು. ಮಾಧ್ಯಮದವರು ಕೂಡ ಪೊಲೀಸರ ಸಹಕಾರದಿಂದ ಈ ಕೆಲಸ ಮಾಡಬಹುದು. ಇನ್ನು, ಹೀಗೆ ಕಾರ್ಯಾಚರಣೆಗೆ ತಯಾರಾಗುವ ಹುಡುಗಿಯರ ಕೈಲಿ ಗನ್ ಕೊಡಬೇಕು.
ಹೆಚ್ಚುಕಮ್ಮಿ ಎಗರಾಡಿ ಮೇಲೆ ಬಂದರೆ ಒಂದಿಬ್ಬರನ್ನು ಅಲ್ಲೇ ಮುಗಿಸಲೂ ಅನುಮತಿ ಸಿಗುವಂತಾಗಬೇಕು. ‘ಸಂಜೆಯಾದ್ರೆ ಹೊರಗೆ ಬರಬೇಡಿಯಮ್ಮ’ ಅಂತ ಆದೇಶ ಮಾಡೋದಕ್ಕಿಂತ ಹಿಂಗೆ ಕ್ಷಿಪ್ರ ಕಾರ್ಯಾಚರಣೆ ಮಾಡಿ, ಸಿಕ್ಕವರ ನರ ಕಟ್ ಮಾಡೋದು ಅತ್ಯಂತ ಅಗತ್ಯ. ಇದಕ್ಕಾಗಿ ತಂಡಗಳನ್ನು ರಚಿಸಬೇಕು. ಹೊಯ್ಸಳ, ಭೀಮಾ ಅಂತ ರಾತ್ರಿ ಎಲ್ಲ ತಿರುಗಾಡುವ ಸಿಬ್ಬಂದಿ, ವಾಹನಗಳನ್ನು ಬಳಸಬಹುದು.
ಹಾಗೆಯೇ ಅತ್ಯಾಚಾರ ನಡೆದ ಪ್ರದೇಶದ ಪೊಲೀಸು, ಮಹಿಳಾ ಕಲ್ಯಾಣ ಇಲಾಖೆ ಸೇರಿ ಸಂಬಂಧಿಸಿದ ಎಲ್ಲ ಅಧಿಕಾರಿಗಳ ಮೇಲೆ ಗಂಟೆಯೊಳಗೆ ನಿರ್ದಾಕ್ಷಿಣ್ಯ ಕ್ರಮವಾಗಬೇಕು. ಅಂದರೆ ಅವರೂ ಎಚ್ಚರದಿಂದ ಇರುತ್ತಾರೆ.
ಇಂತಹ ಪ್ರಕರಣ ನಡೆದಾಗೆಲ್ಲ, ಒಣ ಚರ್ಚೆ ಮಾಡಿ ಸುಮ್ಮನೇ ಕಣ್ಣೀರು ಹಾಕಿ ಮತ್ತು ಹೆಣ್ಣಾಗಿ ಅವಳೇ ಹೊರಗೆ ಹೋಗೋದು ತಪ್ಪು.. ಅಂತ ವಾದಿಸುವ ಬದಲು, ಅವರು ಹೋಗುವಂತಹ ವಾತಾವರಣ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ.
ಎಷ್ಟಂತ ತಾಳೋದು, ಯಾವಾಗ ನಿಲ್ಲೋದು ಇದೆಲ್ಲ? ಇಂತಹದು ಕೇಳಿ ಕೇಳಿ, ಅಮಾಯಕ ಹೆಣ್ಣು ಜೀವಗಳ ಬತ್ತಿದ ಕಣ್ಣುಗಳೊಳಗಿನ ಅಸಹಾಯಕತೆ ನೋಡಿ ನೋಡಿ ರೇಜಿಗೆಯಾಗಿದೆ.
ದೇಶದಲ್ಲಿ ಇಷ್ಟೊಂದು ಪೊಲೀಸು.. ಯೋಧರು, ಎಲ್ಲ ವ್ಯವಸ್ಥೆ, ಗೃಹ ರಕ್ಷಕ ದಳ, ದೊಡ್ಡ ಸರಕಾರಗಳೇ ಇದ್ದರೂ ಏನುಪಯೋಗ? ಕಾಮುಕರು ಕೆಲವರಷ್ಟೇ, ಆದರೂ ಸದಾ ಅವರದೇ ಕೈಮೇಲು! ನಾವೆಲ್ಲ ಸಭ್ಯ ಸಮಾಜ ಅನ್ನಿಸಿಕೊಳ್ಳುವವರು ಲಕ್ಷಾವಧಿ ಜನ. ನಾವೇನು ಮಾಡುತ್ತಿದ್ದೇವೆ ಈ ವಿಷಯದಲ್ಲಿ? ಯಾಕೆ ಗಂಭೀರವಾಗಿ ಇದನ್ನು ತಡೆಯಲಾಗುತ್ತಿಲ್ಲ? ಇಂತಹವುಗಳು ಆದಾಗಷ್ಟೇ ಮರುಗಿ, ಮೇಣದ ಬತ್ತಿ ಹಚ್ಚಿ ಮತ್ತೆ ‘ಯಾಥಾ ಸ್ಥಿತಿಯಲ್ಲೇ’ ನಮ್ಮನೆಯಲ್ಲಿ ಕುಂತು ಬೋಂಡಾ ತಿನ್ನುತ್ತ ಬದುಕಿ ಕಾಲ ಕಳೆಯುತ್ತಿದ್ದೇವೆ. ನಾಳೆ ನಮ್ಮ ಮನೆ ಮಗಳೇ ಹೀಗೆ ಸಾಯಬೇಕಾಗುತ್ತದೆ ಅನ್ನೋ ಅರಿವಿಲ್ಲದಾಗಿದೆ ನಮಗೆ.