ಬಿಜಾಪುರದ ಜವಾರಿ ನೆಲದಲ್ಲಿ ಹುಲುಸಾದ ಪತ್ರಿಕೋದ್ಯಮ ಬೆಳೆ
ಪತ್ರಕರ್ತ ಶಿವಕುಮಾರ ಉಪ್ಪಿನ್ ಬರಹ
ಬಿಜಾಪುರದ ಜವಾರಿ ನೆಲದಲ್ಲಿ ಹುಲುಸಾದ ಪತ್ರಿಕೋದ್ಯಮ ಬೆಳೆ
shivakumar uppin
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯ ಪತ್ರಿಕೋದ್ಯಮ ವಿಭಾಗ ರಾಜ್ಯದಲ್ಲೇ ನಂ.1 ಅನ್ನುವಂತಿದೆ. ಇದು ಎಷ್ಟೊಂದು ಅಡ್ವಾನ್ಸ್ಡ್ ಇದೆ ಎಂದರೆ ಪ್ರತಿ ಹಂತದಲ್ಲೂ ಆಯಾ ಕಾಲಕ್ಕೆ ತಕ್ಕ ಎಲ್ಲ ಬಗೆಯ ತಂತ್ರಜ್ಞಾನ ಪರಿಕರಗಳನ್ನು ಬಳಸಿಕೊಂಡು ಪಕ್ಕಾ ಪತ್ರಿಕೋದ್ಯಮಿಗಳನ್ನು ತಯಾರು ಮಾಡುತ್ತಿದೆ.
ಇಲ್ಲಿನ ಹುಡುಗಿಯರು apple computerಗಳನ್ನು ಬಳಸುತ್ತಾರೆ ಎಂದರೆ ನೀವು ನಂಬಲಿಕ್ಕಿಲ್ಲ! ಟಿವಿಗೆ ಬೇಕಿರುವ ಅತ್ಯಾಧುನಿಕ ಸ್ಟುಡಿಯೋ, ಎಡಿಟಿಂಗ್ ರೂಂ, ಗ್ರೀನ್ ರೂಮ್‌ಗಳಿವೆ. ದಿನಾ ಎರಡು ಪುಟದ ಪತ್ರಿಕೆ ಹೊರ ತರುತ್ತಾರೆ. ಈಗ ಇಪ್ಪತ್ತರಷ್ಟು ಹುಡುಗಿಯರು ಕಲಿಯುತ್ತಿದ್ದಾರೆ. ನೂರಾರು ಹುಡುಗಿಯರು ಕಲಿತು ಹೊರ ಹೋಗಿದ್ದಾರೆ. ಇಷ್ಟಾದರೂ ನಮ್ಮ ಈ ವಿವಿಯ ಪತ್ರಿಕೋದ್ಯಮ ವಿಭಾಗ ಕಾಣಬೇಕಾದ ಪ್ರಚಾರ ಕಂಡಿಲ್ಲ ಅನ್ನುವುದೇ ಬೇಸರ.
ವಿಭಾಗದ ಮುಖ್ಯಸ್ಥ ಡಾ.ಓಂಕಾರ್‌ಗೌಡ ಕಾಕಡೆಯವರ ಅವಿರತ ಶ್ರಮದಿಂದ ಇಷ್ಟು ಒಪ್ಪಾಗಿ ಇದು ಇರಲು ಸಾಧ್ಯವಾಗಿರುವುದು. ಪ್ರಜಾವಾಣಿಯಂತಹ ಪತ್ರಿಕೆಯ ಮೂಲ ಸೆಲೆಯಿಂದ ಬಂದಿರುವ ಕಾಕಡೆಯವರು ನಿರಂತರ ಕ್ರಿಯಾಶೀಲ ವ್ಯಕ್ತಿ. ಪ್ರತ್ಯೇಕ ಸುಂದರ ಕಟ್ಟಡವೇ ಪತ್ರಿಕೋದ್ಯಮ ವಿಭಾಗಕ್ಕಿರುವುದು ಕಂಡು ನಾನು ಅಚ್ಚರಿಗೊಂಡೆ.
ಸುತ್ತ ಉದ್ಯಾನವಿದೆ, ಹಸಿರ ಮಧ್ಯೆ ಇದು ಉಲ್ಲಸಿತವಾಗಿದೆ. ಇಲ್ಲಿನ ಹುಡುಗಿಯರು ಕೂಡ ತುಂಬ ಉತ್ಸಾಹ, ಆಸಕ್ತಿಯಿಂದ ಓದುತ್ತಿದ್ದಾರೆ. ಇವರು ಎಷ್ಟೊಂದು ತಯಾರಾಗಿದ್ದಾರೆ ಎಂದರೆ ಅಂತಿಮ ವರ್ಷ ಮುಗಿಸಿ, Internship ಮುಗಿಯುವುದರೊಳಗೆ ಅಲ್ಲೇ ನೌಕರಿ ಪಡೆಯುವುದು ಪಕ್ಕಾ. ಬಿಜಾಪುರದಂತಹ ಜವಾರಿ ನೆಲದಲ್ಲಿ ಹುಲುಸಾದ ಪತ್ರಿಕೋದ್ಯಮ ಬೆಳೆ ಬರುತ್ತಿರುವುದು ಖುಷಿಯ ಸಂಗತಿ.
ಇಲ್ಲಿನ ಲಕ್ಷ್ಮಿ ಬಾಗಲಕೋಟಿ ಎನ್ನುವ ವಿದ್ಯಾರ್ಥಿನಿ ನಿನ್ನೆ ಸಮ್ಮೇಳನಕ್ಕೆ ಬಂದ ಅತಿಥಿಗಳನ್ನು ಅದೆಷ್ಟು ಚಂದಗೆ ಸಂದರ್ಶಿಸಿದಳೆಂದರೆ, ಕೆಲ ವರ್ಷಗಳಲ್ಲೇ ಈಕೆ ರಾಜ್ಯದ ಉತ್ತಮ ಟಿವಿ ನಿರೂಪಕಿಯಾಗುವುದರಲ್ಲಿ ಯಾವ ಸಂಶಯವಿಲ್ಲ. ಹೀಗೆ ಇಲ್ಲಿ ಹುಡುಗಿಯರು ತಯಾರಾಗುತ್ತಿದ್ದಾರೆ.
ಇದೇ ಕಾರ್ಯ ದಕ್ಷಿಣ ಕರ್ನಾಟಕ ಕಡೆಯ ಊರುಗಳಲ್ಲಿ ಆಗಿದ್ದರೆ ಎಷ್ಟೊಂದು ಪ್ರಚಾರ ಸಿಗುತ್ತಿತ್ತು. ಆದರೆ ನಮಗೆ ನಮಗೆ ನಮ್ಮದೇ ಚಂದಗೆ ಪ್ರೆಸೆಂಟ್ ಮಾಡಿಕೊಳ್ಳಲಾಗಲ್ಲ. ನಮ್ಮ ನಾಯಕರಿಗೋ ಇಚ್ಛಾಶಕ್ತಿಯ ಕೊರತೆ. ಇಂತಹ ಕಾರ್ಯಕ್ಕೆ, ವಿವಿಗೆ ಅವರು ಇನ್ನೂ ಶಕ್ತಿ ತುಂಬಬೇಕಿದೆ.
ಕಾಕಡೆಯವರ ಜತೆ ಪಾಠ ಮಾಡುವ, ಎಲ್ಲದಕ್ಕೂ ಹೆಗಲು ಕೊಟ್ಟು ನಿಂತಿರುವ ಡಾ.ತಹಮಿನಾ ಕೋಲಾರ್, ಸಂದೀಪ್ ಅವರುಗಳು ಮಾದರಿಯೇ ಸರಿ.
ಇವರು ಪತ್ರಿಕೋದ್ಯಮ ವಿಭಾಗದ ಮೂರು ಪಿಲ್ಲರ್‌ಗಳಾದರೆ, ನಾಲ್ಕನೆಯ ಪಿಲ್ಲರ್ PhD scholarಗಳಾದ ದೀಪಾ ತಟ್ಟಿಮನಿ, ಫಿಲೋಮಿನಾ ಮತ್ತು ಸುಷ್ಮಾ ಪವಾರ್ ಅವರುಗಳು. ಇವರು ಅತಿಥಿ ಉಪನ್ಯಾಸಕರಾಗಿ ತಮ್ಮ ನಿರಂತರ ಶ್ರಮ ಹಾಕುತ್ತಿದ್ದಾರೆ. ಪೇಜ್ ಮಾಡುವುದರಿಂದ ಹಿಡಿದು, ಸುದ್ದಿ ಬರವಣಿಗೆ, ಎಡಿಟಿಂಗ್ ಹಾಗೂ ಡಿಜಿಟಲ್ ಮಾಧ್ಯಮಗಳ ವರೆಗೆ ಪ್ರತಿಯೊಂದನ್ನೂ ಬಹಳ ಆಸ್ಥೆಯಿಂದ ಕಲಿಸುತ್ತ ಹುಡುಗಿಯರ ಜತೆ ನಿಜ ಒಡನಾಡಿಗಳ ಹಾಗೆ ಇರುವುದು ಹೆಮ್ಮೆಯ ವಿಷಯ.
ಹಾಗೆಯೇ ಬೇರೆ ವಿಭಾಗಗಳಲ್ಲೂ ವಿವಿಯಲ್ಲಿ ಈ ಪರಂಪರೆ ಮುಂದುವರಿದಿದ್ದು ಉತ್ತಮ ಬೆಳವಣಿಗೆ. ದೀಪಾ ಅಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಒಳ್ಳೆಯ ಸಂಘಟಕಿಯಾಗಿಯೂ ಶ್ರಮಿಸುತ್ತ ವಿದ್ಯಾರ್ಥಿನಿಯರ ಕಾಳಜಿ ಮತ್ತು ಸ್ಕಾಲರ್‌ಗಳಿಗೆ ಉತ್ತಮ ಗೌರವ ಧನ ಒದಗಿಸುವವರೆಗೂ ದುಡಿಯುತ್ತಿದ್ದಾರೆ.
ಇದೆಲ್ಲ ಕೇಳಿ ನಮಗೆಲ್ಲ ಎಷ್ಟೊಂದು ಸಮಾಧಾನ ಅನಿಸುತ್ತೆ. ಇಂತಹ ಎಲ್ಲ ಕೆಲಸಗಳಿಗೆ ನಾವೆಲ್ಲ ಬೆಂಬಲಿಸಬೇಕಿದೆ. ನಮ್ಮ ಹೆಮ್ಮೆಯ ಅಕ್ಕಮಹಾದೇವಿ ಮಹಿಳಾ ವಿವಿ ದೇಶದಲ್ಲೇ ಹೆಸರುವಾಸಿಯಾಗಲು ಇನ್ನೂ ಎಲ್ಲರೂ ತೊಡಗಿಕೊಳ್ಳಬೇಕಿದೆ.
ಇವತ್ತು ಪತ್ರಕರ್ತ ಮಿತ್ರ ಸಂಗಮೇಶ ಮೆಣಸಿನಕಾಯಿಯವರು ಈ ವಿದ್ಯಾರ್ಥಿನಿಯರಿಗೆ ಡಿಜಿಟಲ್ ಸಾಧ್ಯತೆಗಳ ಕುರಿತು ಒಂದೊಳ್ಳೆಯ ಪಾಠ ಮಾಡಿದರು. ಅದಕ್ಕೆ ನಾನೂ ಸಾಕ್ಷಿಯಾದೆ. ಆ ಸಂದರ್ಭ ವಿವಿಗೆ ಹೋದಾಗ ಇದೆಲ್ಲ ನೋಡಿ ಇಷ್ಟು ಬರೆಯಲು ಮನಸ್ಸಾಯಿತು. ಬರದ ನಾಡೆನಿಸಿಕೊಳ್ಳುತ್ತಲೇ ಸೊರಗುತ್ತ ಬಂದ ನಮ್ಮ ನೆಲದ ಅನನ್ಯತೆ ಇದು.
–ಶಿವಕುಮಾರ ಉಪ್ಪಿನ, ಪತ್ರಕರ್ತ-ಬರಹಗಾರ