ಕರಡಿಯನ್ನು ಮದುವೆಯಾಗಲು ಒಪ್ಪಿದ ಹುಡುಗಿಗೆ ಒಲಿದಿತ್ತು ಅದೃಷ್ಟ
ದಿನಕ್ಕೊಂದು ಕಥೆ
ಹುಡುಗಿ ಮತ್ತು ಕರಡಿ ರಾಜ
ಒಂದೂರಿನಲ್ಲಿ ಒಬ್ಬ ಕಡು ಬಡವನಿದ್ದ, ದಿನಾ ಕಾಡಿಗೆ ಹೋಗಿ ಸೌದೆ ಕಡಿದು ಮಾರಿ ಜೀವನ ನಡೆಸುವುದು ಅವನ ವೃತ್ತಿಯಾಗಿತ್ತು. ಅವನಿಗೆ ಮೂರು ಜನ ಸುಂದರವಾದ ಹೆಣ್ಣುಮಕ್ಕಳಿದ್ದರು. ಅವರಲ್ಲಿ ಕೊನೆಯವಳು ಅತಿ ಸೌಂದರ್ಯವತಿ ಹಾಗೂ ಬುದ್ಧಿವಂತಳಾಗಿದ್ದಳು. ಒಮ್ಮೆ ಆತ ಕಾಡಿನಲ್ಲಿ ಸೌದೆ ಕಡಿಯುತ್ತಾ ಯಾವತ್ತಿಗಿಂತ ಸ್ವಲ್ಪ ದಟ್ಟ ಕಾಡಿನಲ್ಲಿ ಹೋಗಿದ್ದ.
ಅವನು ಮರ ಕಡಿಯುತ್ತಿದ್ದಾಗ ಎಲ್ಲಿಂದಲೋ ಬಂದ ದೊಡ್ಡ ಕರಡಿಯೊಂದು ಇವನ ಕೊಡಲಿಯನ್ನು ಕಿತ್ತುಕೊಂಡು, ‘ಯಾರು ನಿನಗೆ ಇಲ್ಲಿ ಸೌದೆ ಕಡಿಯಲು ಅನುಮತಿ ಕೊಟ್ಟಿದ್ದು, ಇದು ನನ್ನ ಕಾಡು, ನನ್ನ ಅನುಮತಿಯಿಲ್ಲದೆ ಇಲ್ಲಿ ಒಂದು ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ’ ಎಂದು ಕೂಗಿತು.
ಮೊದಲೇ ಕರಡಿ. ಅದೂ ಅಲ್ಲದೇ ಮಾತನಾಡುತ್ತಿದೆಯಲ್ಲಾ ಎಂದು ಸೌದೆ ಕಡಿಯುವವನಿಗೆ ಒಂದು ಕ್ಷಣ ಭಯವಾಯಿತು. ನೀನು ನನ್ನ ಪ್ರದೇಶದ ಸೌದೆಯನ್ನೆಲ್ಲಾ ನನ್ನ ಅಪ್ಪಣೆಯಿಲ್ಲದೆ ಕದ್ದು ತೆಗೆದುಕೊಂಡು ಹೋಗಿದ್ದೀಯಾ, ಅದಕ್ಕೆ ನೀನು ಈಗ ನಿನ್ನ ಪ್ರಾಣವನ್ನೇ ಕೊಡಬೇಕು ಎಂದಿತು ಕರಡಿ.
‘ಓಹ್, ನಾನು ಸೌದೆ ಮಾರಿ ಬಂದ ದುಡ್ಡಿನಿಂದ ನನ್ನ ಜೀವನವನ್ನು ಸಾಗಿಸುತ್ತಿದ್ದೇನೆ ಹಾಗೂ ನನ್ನ ಮೂವರು ಹೆಣ್ಣು ಮಕ್ಕಳನ್ನು ಸಾಕುತ್ತಿದ್ದೇನೆ. ದಯವಿಟ್ಟು ನನ್ನನ್ನು ಕ್ಷ ಮಿಸು. ನೀನು ನನ್ನನ್ನು ಕೊಂದರೆ ನನ್ನ ಹೆಣ್ಣು ಮಕ್ಕಳು ಅನಾಥವಾಗುತ್ತಾರೆ ಹಾಗೂ ಹಸಿವಿನಿಂದ ಸಾಯುತ್ತಾರೆ, ನಾನು ಇನ್ನು ಮುಂದೆ ಈ ಕಡೆ ಬರುವುದಿಲ್ಲ’ ಎಂದನು.
ಅದಕ್ಕೆ ಒಂದು ಕ್ಷ ಣ ಯೋಚಿಸಿದ ಕರಡಿ, ‘ಸರಿ ಹಾಗಾದರೆ, ನಿನ್ನನ್ನು ಕ್ಷಮಿಸಬೇಕೆಂದರೆ ಹಾಗೂ ನಿನ್ನನ್ನು ಜೀವಂತವಾಗಿ ಬಿಡಬೇಕೆಂದರೆ ನೀನು ನಿನ್ನ ಮೂವರು ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ನನಗೆ ಮದುವೆ ಮಾಡಿ ಕೊಡಬೇಕು’ ಎಂದಿತು.
ಸೌದೆ ಮಾರುವವನಿಗೆ ಏನು ಉತ್ತರ ಕೊಡಬೇಕೋ ಗೊತ್ತಾಗಲಿಲ್ಲ. ನಾನು ಸತ್ತು ನನ್ನ ಮಕ್ಕಳು ಅನಾಥವಾಗುವುದಕ್ಕಿಂತ ಯಾರಾದರೂ ಒಬ್ಬಳು ಮಗಳನ್ನು ಈ ಕರಡಿಗೆ ಮದುವೆ ಮಾಡಿಕೊಟ್ಟರೆ ಜೀವವೂ ಉಳಿಯುತ್ತದೆ, ಸದ್ಯಕ್ಕೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಬಹುದೆಂದು ಹಾಗೆಯೇ ಆಗಲಿ ಎಂದನು.
ಸರಿ ಹಾಗಾದರೆ ನಾನು ನಾಳೆ ಇಲ್ಲೇ ಕಾದಿರುತ್ತೇನೆ, ತಪ್ಪದೇ ನೀನು ನಿನ್ನ ಮಗಳೊಂದಿಗೆ ಬರಬೇಕು. ಕೊಟ್ಟ ಮಾತಿಗೆ ತಪ್ಪಬಾರದು ಎಂದಿತು. ಆಗಲಿ ಎಂದು ಅಲ್ಲಿಂದ ಹೊರಟನು.
ಮನೆಗೆ ಬಂದ ಸೌದೆ ಮಾರುವವ ತನ್ನ ಹೆಣ್ಣು ಮಕ್ಕಳನ್ನು ಕರೆದು ನಡೆದ ಕಥೆಯನ್ನೆಲ್ಲಾ ಹೇಳಿದನು. ಇದನ್ನು ಕೇಳಿದ ದೊಡ್ಡ ಹೆಣ್ಣು ಮಕ್ಕಳಿಬ್ಬರು ಆ ಕರಡಿಯನ್ನು ಮದುವೆಯಾಗುವ ಬದಲು ಸಾಯುವುದೇ ಮೇಲು ಎಂದು ತಮ್ಮಿಂದ ಆ ಕರಡಿಯನ್ನು ಮದುವೆಯಾಗುವುದು ಸಾಧ್ಯವಿಲ್ಲವೆಂದು ಹೇಳಿದರು.
ಮೂರನೇ ಮಗಳು ಮುಂದೆ ಬಂದು, ‘ನಾನು ಆ ಕರಡಿಯನ್ನು ಮದುವೆಯಾಗುತ್ತೇನೆ, ನೀವು ಕೊಟ್ಟ ಮಾತನ್ನು ಉಳಿಸುತ್ತೇನೆ’ ಎಂದಳು.
ಮರುದಿನ ಬೆಳಗ್ಗೆ ಎದ್ದು ತಂದೆ ಹಾಗೂ ಕಿರಿಯ ಮಗಳು ಕಾಡಿನ ಕಡೆ ಹೊರಡಲು ಸಿದ್ಧರಾಗಿದ್ದರು. ಊರಿನಲ್ಲೆಲ್ಲಾ ಈ ಸುದ್ದಿ ಹರಡಿ ಎಲ್ಲರೂ ಸೌದೆ ಮಾರುವವನಿಗೆ ಹಾಗೂ ಆತನ ಮಗಳಿಗೆ ತಲೆ ಕೆಟ್ಟಿರಬೇಕೆಂದು ಮಾತನಾಡಿಕೋಳ್ಳುತ್ತಿದ್ದರು.
ಇದನ್ನೆಲ್ಲಾ ತಲೆಗೆ ಹಾಕಿಕೊಳ್ಳದೆ ತಂದೆ ಮಗಳಿಬ್ಬರೂ ಕಾಡಿನ ಹಾದಿ ಹಿಡಿದರು. ತಂದೆ ಮಗಳನ್ನು ಕಂಡ ಕರಡಿಗೆ ಖುಷಿಯಾಯಿತು. ಕರಡಿಯನ್ನು ಕಂಡ ಹುಡುಗಿ, ‘ಓ ಕರಡಿಯೇ, ನನ್ನ ತಾಯಿ ಯಾವಾಗಲೂ ದೇವರ ಮಾಡಿದ ನಿಯಮಗಳನ್ನು ಮೀರಬಾರದು ಎಂದು ಹೇಳುತ್ತಿದ್ದಳು. ಹಾಗಾಗಿ ನಾನು ನಿನ್ನೊಂದಿಗೆ ಶಾಸ್ತ್ರೋಕ್ತವಾಗಿ ಮದುವೆಯಾಗಲು ಬಯಸುತ್ತೇನೆ’ ಎಂದಳು.
ಅದಕ್ಕೆ ಕರಡಿ, ಹಾಗೆಯೇ ಆಗಲಿ, ಅದರೆ ಪೌರೋಹಿತ್ಯ ಮಾಡುವವರು ಯಾರು? ಎಂದಿತು. ಅದಕ್ಕೆ ಆಕೆಯ ತಂದೆ ನಾನು ಊರಿಗೆ ಹೋಗಿ ಪುರೋಹಿತರನ್ನು ತರುತ್ತೇನೆ ಎಂದು ಊರಿನ ಕಡೆ ಹೋಗಿ ಪುರೋಹಿತರನ್ನು ಕರೆತಂದನು. ಇವನ ಹಿಂದೆ ಊರಿನ ಕೆಲವರು ಕರಡಿ ಜೊತೆ ಮದುವೆ ನೋಡಲು ಬಂದರು.
ಶಾಸ್ತ್ರೋಕ್ತವಾಗಿ ಮದುವೆ ನಡೆದು ತಾಳಿ ಕಟ್ಟುತ್ತಿದ್ದಂತೆ ಕರಡಿಯ ಜಾಗದಲ್ಲಿ ಒಬ್ಬ ಸುಂದರ ಯುವಕ ಪ್ರತ್ಯಕ್ಷನಾಗಿದ್ದ. ಅಲ್ಲದೇ ಅಲ್ಲಿದ್ದ ಕಾಡೆಲ್ಲ ಮಾಯವಾಗಿ ಸುಂದರ ಅರಮನೆಯೊಂದು ಪ್ರತ್ಯಕ್ಷ ವಾಗಿತ್ತು. ಇದನ್ನು ಕಂಡ ಅಲ್ಲಿದ್ದವರಿಗೆಲ್ಲಾ ಆಶ್ಚರ್ಯವಾಯಿತು. ಹುಡುಗಿ ತನ್ನ ಕಣ್ಣುಗಳನ್ನು ತಾನೇ ನಂಬದಾದಳು.
ಆಗ ಆ ಯುವಕ ತಾನೊಬ್ಬ ರಾಜಕುಮಾರನೆಂದೂ, ಒಬ್ಬ ಋುಷಿಗೆ ತೊಂದರೆ ಕೊಟ್ಟಿದ್ದರಿಂದ ಅವರ ಶಾಪದಿಂದ ಕರಡಿಯಾಗಿದ್ದೆ. ಯಾವುದಾದರೂ ಸುಂದರ ಹುಡುಗಿ ನಿನ್ನನ್ನು ಮದುವೆಯಾದರೆ ನೀನು ಮೊದಲಿನಂತಾಗುತ್ತಿ ಎಂದು ಹೇಳಿದ್ದರು. ಆ ಸುದಿನ ಇಂದು ಬಂದಿದೆ ಎಂದು ಹೇಳಿದನು.
ಸೌದೆ ಮಾರುವವನ ಆನಂದಕ್ಕೆ ಪಾರವೇ ಇಲ್ಲವಾಗಿತ್ತು. ಅಪ್ಪನು ಕರಡಿಗೆ ಕೊಟ್ಟ ಮಾತನ್ನು ಉಳಿಸಲು ಹಿಂದೆ ಮುಂದೆ ನೋಡದೆ ಕರಡಿಯನ್ನು ಮದುವೆಯಾಗಲು ಒಪ್ಪಿಕೊಂಡ ಹುಡುಗಿಗೆ ಅದೃಷ್ಟ ಒಲಿದಿತ್ತು. ಅವಳ ಒಳ್ಳೆತನಕ್ಕೆ ತಕ್ಕ ಬಹುಮಾನ ಸಿಕ್ಕಿತ್ತು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882