ಬಸವಣ್ಣ ‘ನಾಲ್ಕು ಕಾಲಿನ ಎತ್ತಲ್ಲ’ ಅಂದವರೇ ಲಿಂಗಾನಂದ ಶ್ರೀ!
ಆ ದುರ್ದಿನಗಳಲ್ಲಿ ಬಸವಾದಿ ಶರಣರನ್ನು ಹಳ್ಳಿ ಹಳ್ಳಿಗೂ ತಲುಪಿಸಿ, ಸಾಮಾನ್ಯರಲ್ಲಿ ‘ಲಿಂಗಾಯತ’ದ ಅರಿವು ಮೂಡಿಸಿದ್ದು ಲಿಂಗಾನಂದ ಶ್ರೀಗಳು.
ಇವತ್ತು ಅವರ ಪುಣ್ಯ ಸ್ಮರಣೆ. ತಮ್ಮ ನಂತರ ಮಾತೆ ಮಹಾದೇವಿ, ನಿಜಗುಣಾನಂದ ಶ್ರೀಗಳಂತಹ ಅನೇಕರನ್ನು ತಯಾರು ಮಾಡಿ, ಏನೇನು ಹೋರಾಟಕ್ಕೆ ಕಾರಣರಾದರು ಅಂತ ಈ ನಾಡು ನೋಡಿದೆ.
ಬಸವಣ್ಣ ಎಂದರೆ ನಾಲ್ಕು ಕಾಲಿನ ಎತ್ತು ಎಂದು ತೋರಿಸಿ, ಕಲ್ಯಾಣ ಕ್ರಾಂತಿಯನ್ನು ಮರೆ ಮಾಡುವ ಹುನ್ನಾರದ ಮುಂದುವರಿದ ದಿನಗಳಾಗಿದ್ದವು ಅವು. ಅದನ್ನು ತಮ್ಮ ಪ್ರವಚನಗಳ ಮೂಲಕ ಸತ್ಯ ಬಿಚ್ಚಿಡಲು ಪರಿಣಾಮಕಾರಿಯಾಗಿ ಹೆಣಗಾಡಿದವರು ಲಿಂಗಾನಂದರು.
ಸಾಮಾನ್ಯರಿಗೆ ಶರಣ ಸಂಸ್ಕೃತಿಯ ‘ಚೌಕಟ್ಟು’ ಹಾಕಲು ಅನೇಕರ ವಿರೋಧ ಎದುರಿಸಿದರು, ಕಲ್ಲಿನಿಂದ ಹೊಡೆಸಿಕೊಂಡರು! ಎಂಟು ನೂರು ವರ್ಷಗಳ ನಂತರವೂ ‘ಲಿಂಗಾಯತ’ದ ಸ್ಥಿತಿ ಹಾಗಿತ್ತು. ಈಗಲೂ ಇದೆ. ಆದರೆ, ಒಂದಷ್ಟು ಬದಲಾವಣೆ ಗಾಳಿ ಬೀಸಿದೆ.
ಕೆಲ ವೀರಶೈವ ಮಠಾಧೀಶರು ಇವರನ್ನು ಕಂಡರೆ ಬೆಂಕಿಯಾಗುತ್ತಿದ್ದರು.
ಅವರಿಗೆ ಲಿಂಗಾಯತರಲ್ಲಿ ಪ್ರಜ್ಞೆ ಮೂಡಿ, ತಮ್ಮ ಮಠದ ‘ಗಳಿಕೆ’ ನಿಂದ್ರೋದು ಬೇಕಿರಲಿಲ್ಲ. ಪಗಡೆ ಹಾಕಿ, ಪಂಚಾಂಗ ಓದಿ, ಚೀಟಿ ಕಟ್ಟಿ, ಬಂದವರಿಗೆ ಒಂದು ರೊಟ್ಟಿ ಕೊಡದೆ ಊದಿನ ಕಡ್ಡಿ ಬೂದಿಯನ್ನೇ ‘ಪ್ರಸಾದ’ ಎಂದು ಹಣೆಗೆ ಹಚ್ಚಿ ಕಳಿಸಿದವರೇ ಹೆಚ್ಚು! ಅದು ಇವತ್ತೂ ಪೂರ್ಣ ನಿಂತಿಲ್ಲ.
ಬಸವನ ಬಾಗೇವಾಡಿ ಬಳಿಯ ಮನಗೂಳಿಯಲ್ಲಿ ಜನಿಸಿದ್ದ ಲಿಂಗಾನಂದರು ಇದೆಲ್ಲ ಜನಕ್ಕೆ ತಿಳಿ ಹೇಳಲು ಪಡಬಾರದ ಕಷ್ಟ ಪಟ್ಟರು. ಇದು ಒಂದಿನದ ಕೆಲಸವಾಗಿರಲಿಲ್ಲ. ಅದು ಅವರ ನಿರಂತರ ಹಪಹಪಿಯಾಗಿತ್ತು.
ಸೊನ್ನೆಯಿಂದ ಶುರುವಾಗಿ ಎಲ್ಲೆಡೆ ಬಸವ ಮಂಟಪಗಳನ್ನು ಕಟ್ಟಿ, ಬಸವ ಪಡೆ ನಿರ್ಮಿಸುವ ವರೆಗಿನ ತಪಸ್ಸಾಗಿತ್ತು. ಇಷ್ಟಲಿಂಗ ಪೂಜೆಯ ಅರಿವು ಬಿತ್ತಿ, ‘ಕೋಟಿ ದೇವರು’ಗಳ ಕಡೆಗಿದ್ದ ಲಿಂಗಾಯತರನ್ನು ‘ಒಂದೇ’ ದಾರಿಗೆ ತಂದರು.
ಇವತ್ತು ಬಸವಾದಿ ಶರಣರ ತತ್ವಕ್ಕಾಗಿ ಸಾವಿರಾರು ಜನ ರಾತ್ರೋರಾತ್ರಿ ಎದ್ದು ನಿಲ್ಲುವಂಗೆ ಮಾಡಿದವರು ಇವರು ಮತ್ತು ಮಾತೆ ಮಹಾದೇವಿಯವರು. ಈಗಿನ ಲಿಂಗಾಯತ ಚಳವಳಿಗೆ ಬಲ ಬಂದಿದ್ದೇ ಇವರುಗಳು ಹಚ್ಚಿದ ಕಿಚ್ಚಿನಿಂದ. ವಚನ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸಿದರು.
ನಾನಿನ್ನೂ ಪ್ರಾಥಮಿಕ ಶಾಲೆಯಲ್ಲಿದ್ದಾಗ ನಮ್ಮೂರಿಗೆ ಈಗಿನ ಗಂಗಾಮಾತೆಯವರು ಬಂದು ಪ್ರವಚನ ನೀಡಿದ್ದು ನೆನಪಿದೆ. ನಮ್ಮೂರವರ ಸ್ಪಂದನೆ ಹೇಗಿತ್ತು ಅಂತಲೂ ಗೊತ್ತಿದೆ.
ಕೆಲ ಟೀಕೆಗಳು ಇರಬಹುದು. ಆದರೆ, ಅದೇ ಕಾರಣಕ್ಕೆ ಇವರೆಲ್ಲ ತಮ್ಮ ಜೀವನವೇ ಅಡವಿಟ್ಟು ಹಾಕಿದ ಇಂತಹ ಬುನಾದಿಯ ಬಗ್ಗೆ ನಾವಿಂದು ಒಂಜರವಾದರೂ ಮಾತನಾಡದೇ ಇದ್ದರೆ, ನಾವು ‘ಉಪಗಾರಗೇಡಿ’ಗಳಾಗುತ್ತೇವೆ. ನಾವು ಇವರನ್ನು ಸ್ಮರಿಸಲೇ ಬೇಕು. ಬಸವಾದಿ ಶರಣರ ಬಂಡಿ ಎಳೆದವರು ಇವರು. ಇವರಿಬ್ಬರ ಚೇತನಕ್ಕೂ ಈ ಸಂದರ್ಭದಲ್ಲಿ ಶರಣು.
–ಶಿವಕುಮಾರ್ ಉಪ್ಪಿನ್,
ಪತ್ರಕರ್ತ-ಬರಹಗಾರ