ಕರ್ನಾಟಕದಲ್ಲಿ ಹಿಟ್ ವಿಕೆಟ್ ಆಗುತ್ತಾ ಭಾರತೀಯ ಜನತಾ ಪಾರ್ಟಿ!
ಬಿಎಸ್ ವೈ ಬದಿಗಿಟ್ಟು ಗೆಲ್ಲುತ್ತಾ ಬಿಜೆಪಿ?
ರನ್ನಿನ ಹೊಳೆ ಹರಿಸುವ ಸಚಿನ್ ತಂಡೂಲ್ಕರ್ ಟೀಮ್ ಇಂಡಿಯಾದಲ್ಲಿದ್ದಾರೆ ಅಂದಮೇಲೆ ಮೊದಲಿಗೆ ಅವರಿಗೆ ತಾನೆ ಫೀಲ್ಡಿಗಿಳಿಸಬೇಕು. ಅದನ್ನು ಬಿಟ್ಟು ಸಚಿನ್ಗೂ ಕೋಚ್ ಕೊಡೋದು ನಾನೇ ಅಲ್ಲವೇ. ನನ್ನ ಸ್ಟ್ಯಾಟಜಿಯೇ ಗೆಲ್ಲೋದು ಅಂತ ರನ್ ಹೊಡೆಯುವವನನ್ನು ಬಿಟ್ಟು ಮಧ್ಯಮ ಕ್ರಮಾಂಕದ ಆಟಗಾರನನ್ನು ಮಂದೆ ಬಿಟ್ಟರೆ ಮ್ಯಾಚ್ ಗೆಲ್ಲೋದುಂಟೆ. ಸಚಿನ್ ಗೆ ಕಡಿವಾಣ ಹಾಕಿದ್ದಿದ್ದರೆ ಧೋನಿ ಟೀಮಿಗೆ ವಿಶ್ವಕಪ್ ದಕ್ಕುತ್ತಿತ್ತೇ. ಇಲ್ಲಾತಾನೇ, ಹಾಗಾಗ್ತಿದೆಯಾ ಭಾರತೀಯ ಜನತಾ ಪಾರ್ಟಿಯ ಕಥೆ.
ಮುಂಬರುವ ಚುನಾವಣಾ ದೃಷ್ಟಿಯಿಂದ ಸದ್ಯ ಕರ್ನಾಟಕವೂ ಭಾರತೀಯ ಜನತಾ ಪಾರ್ಟಿಗೆ ಉತ್ತಮವಾದ ‘ಪಿಚ್’ ಆಗಿದೆ. ಆದರೆ, ಆಟಗಾರರನ್ನು ಕಣಕ್ಕಿಳಿಸುವ ‘ಕೋಚ್’ ಹಾಗೂ ‘ಕ್ಯಾಪ್ಟನ್’ ನ ತಂತ್ರಗಾರಿಕೆ ಮೇಲೆ ‘ಗೇಮ್’ ನಿಂತಿದೆ. ಆದ್ರೆ, ಅತಿಯಾದ ಆತ್ಮ ವಿಶ್ವಾಸದಲ್ಲಿರುವ ಬಿಜೆಪಿ ನಾಯಕರು ಕರ್ನಾಟಕದಲ್ಲಿ ‘ಹಿಟ್ ವಿಕೆಟ್’ ಆಗ್ತಾರಾ ಅನ್ನೋ ಅನುಮಾನಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಹೌದು, ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ, ಕೆಜೆಪಿ ಮತ್ತು ಬಿಎಸ್ ಆರ್ ಅಂತ ಮೂರು ಹೋಳಾಗಿದ್ದ ಬಿಜೆಪಿ ನಾಯಕರು ಯಾರೊಬ್ಬರೂ ದಡ ಮುಟ್ಟಲಾಗಿರಲಿಲ್ಲ. ಬಿಜೆಪಿ ಶಾಸಕರ ಸಂಖ್ಯೆ ಪಾತಾಳಕ್ಕೆ ಕುಸಿದಿತ್ತು. ಬಳಿಕ ಮತ್ತೆ ಕೆಜೆಪಿ, ಬಿಎಸ್ ಆರ್ ಪಕ್ಷದ ನಾಯಕರು ಬಿಜೆಪಿ ಜತೆಗೂಡಿದ್ದರು. ಜತೆಗೆ ನರೇಂದ್ರ ಮೋದಿ ಅವರ ‘ಹವಾ’ದ ಕಾರಣ ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಬಿಜೆಪಿ ಸಂಸದರು ಗೆದ್ದರು. ಬಳಿಕ ಮತ್ತೆ ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯದ್ಯಕ್ಷರಾಗುತ್ತಿದ್ದಂತೆ ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ಮದ್ಯೆ ಶುರುವಾದ ಭಿನ್ನಮತ ಬಿಜೆಪಿ ‘ಇಮೇಜಿ’ಗೆ ದಕ್ಕೆ ತಂದಿದ್ದು ಸುಳ್ಳಲ್ಲ. ಇನ್ನೇನು ಅವರಿಬ್ಬರ ಭಿನ್ನಮತ ಶಮನವಾಗಿದೆ ಅನ್ನುವಷ್ಟರಲ್ಲಿ ಈಗ ಮತ್ತೊಂದು ಹೊಡೆತ ಬಿದ್ದಿದೆ.
ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮದ್ಯೆ ಶೀಥಲ ಸಮರ ಇದ್ದದ್ದು ‘ಓಪನ್ ಸಿಕ್ರೇಟ್ ‘. ಇದೀಗ ಸಂತೋಷ್ ರಾಜ್ಯ ರಾಜಕಾರಣದಲ್ಲಿ ಮತ್ತೆ ಸಕ್ರಿಯರಾಗುತ್ತಿದ್ದು ಖುದ್ದು ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ಅವರೇ ಅದಕ್ಕೆ ‘ಗ್ರೀನ್ ಸಿಗ್ನಲ್’ ನೀಡಿದ್ದಾರಂತೆ.
ಅಷ್ಟೇ ಅಲ್ಲ, ಚುನಾವಣಾ ದೃಷ್ಟಿಯಿಂದ ರಾಜ್ಯದಲ್ಲಿ 55ಸಾವಿರಕ್ಕೂ ಹೆಚ್ಚು ಬಿಜೆಪಿ ಭೂತ್ ಕಮಿಟಿಗಳ ರಚನೆ ಮಾಡಲಾಗುತ್ತಿದೆ. ಹೀಗಾಗಿ, ಭೂತ್ ಕಮಿಟಿ ರಚನೆ ಹಾಗೂ ತರಬೇತಿ ಸಮಿತಿಗೆ 40ಜನ ಉಸ್ತುವಾರಿಗಳನ್ನು ನೇಮಿಸಿ ಇಂದು ಅಮಿತ್ ಶಾ ಆಧೇಶಿಸಿದ್ದಾರಂತೆ. ಆ 40 ಜನರಲ್ಲಿ ಭಾನುಪ್ರಕಾಶ್, ಸಿಟಿ ರವಿ, ಡಾ.ಶಿವಯೋಗಿಸ್ವಾಮಿ, ಮುನಿರಾಜುಗೌಡ, ನಿರ್ಮಲ್ ಕುಮಾರ್ ಸುರಾನಾ, ಪ್ರಕಾಶ ಅಕ್ಕಲಕೋಟ್, ಜಯತೀರ್ಥ ಅವರೂ ಇದ್ದಾರೆ.
ಆ ಪೈಕಿ ಬಿ.ಎಲ್.ಸಂತೋಷ್ ಬೆಂಬಲಿಗರೇ 30ಕ್ಕೂ ಹೆಚ್ಚು ಜನರಿದ್ದಾರೆ. ಸಂತೋಷ್ ಅವರ ಸಲಹೆ ಮೇರೆಗೆ ಈ ಸಮಿತಿ ರಚನೆ ಆಗಿದೆ. ಉಸ್ತುವಾರಿಗಳು ತುಂಬಾ ‘ಪವರ್ ಫುಲ್’ ಆಗಿರುತ್ತಾರೆ ಎನ್ನಲಾಗುತ್ತಿದೆ. ನಾಳೆಯೇ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸಮಿತಿಯ ಉಸ್ತುವಾರಿಗಳು ಸಭೆ ಸೇರಲಿದ್ದಾರೆಂದು ತಿಳಿದುಬಂದಿದೆ.
ಆ ಮೂಲಕ ಬಿ.ಎಲ್.ಸಂತೋಷ್ ಮತ್ತು ಬಿ.ಎಸ್.ಯಡಿಯೂರಪ್ಪ ಮದ್ಯೆ ಮತ್ತೆ ಸಮರ ಶುರುವಾಗಲಿದೆ. ಈಗಾಗ್ಲೇ ಬಿ.ಎಸ್.ಯಡಿಯೂರಪ್ಪ ಅವರೇ ಬಿಜೆಪಿಯ ಮುಖ್ಯಮಂತ್ರಿ ಅಬ್ಯರ್ಥಿಯೆಂದು ಬಿಜೆಪಿ ಘೋಷಿಸಿದೆ. ಆದರೆ, ಮತ್ತೊಂದು ಕಡೆ ಬಿಜೆಪಿ ಬಹುಮತ ಪಡೆದರೆ ಬಿ.ಎಲ್. ಸಂತೋಷ್ ಅವರನ್ನೇ ಮಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆಂಬ ಮಾತುಗಳೂ ಕೇಳಿಬರುತ್ತಿವೆ.
ಆಂತರಿಕ ರಾಜಕೀಯದಿಂದಾಗಿ ರಾಜ್ಯದಲ್ಲಿ ಬಿಜೆಪಿಯ ‘ಮಾಸ್ ಲೀಡರ್’ ಆಗಿರುವ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಮುನಿಸಿಕೊಂಡರೆ ಕಮಲ ಕಲಹದಿಂದ ಕಳೆಗುಂದುವುದು ಗ್ಯಾರಂಟಿ. ಪರಿಣಾಮ ಬಿಜೆಪಿ ನಾಯಕರು ಅತಿಯಾದ ಆತ್ಮವಿಶ್ವಾಸದಲ್ಲಿ ವಿಭಿನ್ನ ‘ಸ್ಟ್ಯಾಟಜಿ’ ಮಾಡಲು ಹೋಗಿ ‘ಹಿಟ್ ವಿಕೆಟ್’ ಆಗ್ತಾರಾ ಎಂಬ ವಾದವು ಬಿಜೆಪಿ ವಲಯದಿಂದಲೇ ಕೇಳಿಬರುತ್ತಿದೆ.
-ಸಂ