ಯೋಗ ನಿದ್ರೆಯಲ್ಲಿ ಮಲಗಿದ ಬುದ್ಧ ತಾಣ ವೀಕ್ಷಣೆಗೆ ಆಗಮಿಸಿದ ಪ್ರವಾಸಿಗರು
ಯೋಗ ನಿದ್ರೆಯಲ್ಲಿ ಮಲಗಿದ ಬುದ್ಧ ತಾಣ ವೀಕ್ಷಣೆಗೆ ಆಗಮಿಸಿದ ಪ್ರವಾಸಿಗರು
ಸೂರ್ಯಾಸ್ತ ಸಮಯದ ಸುಂದರ ಸುಶಾಂತ ಬುದ್ಧರ ಸುಚಿತ್ರ
ಶಹಾಪುರಃ ಸೂರ್ಯಾಸ್ತ ಸಮಯ ಸುಂದರ ಸುಶಾಂತ ಬುದ್ಧರ ಸುಚಿತ್ರವನ್ನು ಯಾದಗಿರಿ ಜಿಲ್ಲೆಯ ಖ್ಯಾತ ಫೋಟೊಗ್ರಾಫರ್ ಮಂಜುನಾಥ ಬಿರಾದಾರ ಸಗರ ಅವರು ನಿನ್ನೆ ಸೂರ್ಯಾಸ್ತ ಸಮಯ ಸುಸಂದರ್ಭೋಚಿತ ಸುಚಿತ್ರವನ್ನು ಸುಂದರವಾಗಿ ಸೆರೆ ಹಿಡಿದಿದ್ದಾರೆ.
ಈ ಮನಮೋಹಕ ತಾಣ ವೀಕ್ಷಣೆಗೆ ಈಗ ನಗರ ಜನತೆ ಮನ ಸೋತಿದ್ದಾರೆ. ಅಷ್ಟೆ ಅಲ್ಲದೆ ಪ್ರವಾಸಿಗರು ಸಹ ಯೋಗಿ ನಿದ್ರಾವಸ್ಥೆಯಲ್ಲಿರುವ ಬುದ್ಧನ ತಾಣ ನೋಡಲು ಆಗಮಿಸುತ್ತಿರುವದು ಖುಷಿ ಇಮ್ಮಡಿಯಾಗಿದೆ.
ಇದಕ್ಕೆ ಪ್ರಮುಖ ಕಾರಣವೆಂದರೆ, ಮಾವಿನ ಕೆರೆ ಅಭಿವೃದ್ಧಿ ಕಾರ್ಯ ಎನ್ನಬಹುದು.
ಈ ಮೊದಲು ಮಾವಿನ ಕೆರೆ ಒಡ್ಡಿನ ಮೇಲೆ ಸುತ್ತಲೂ ಪಾದಚಾರಿಗಳಿಗೆ ಅನುಕೂಲ ಕಲ್ಪಿಸಿ ಸುತ್ತಲೂ ಗ್ರಿಲ್ ಹಾಕಲಾಗಿತ್ತು. ಅಲ್ಲದೆ ಸಸಿಗಳನ್ನು ನೆಡಲಾಗಿತ್ತು. ಆದರೆ ಸಮರ್ಪಕ ನಿರ್ವಹಣೆ ಇಲ್ಲದೆ ಹಾಳಾಗಿತ್ತು. ಮತ್ತೆ ಸುತ್ತಲೂ ಜಾಲಿಗಿಡಗಳು ಹೆಮ್ಮರವಾಗಿ ಬೆಳೆದು ನಿಂತಿದ್ದವು.
ಹೀಗಾಗಿ ಹಾವು, ಉಳ ಉಪಟಿಗಳ ಕಾಟ ಜಾಸ್ತಿ ಇತ್ತು. ಜನ ಹೋಗಲು ಹೆದರುತ್ತಿದ್ದರು. ಆದರೆ ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಬಸವರಾಜ ಚಲವಾದಿ ಹಾಗೂ ಸ್ನೇಹಿತರು ಜಾಲಿಗಿಡಗಳನ್ನು ಸ್ವಯಂ ಪ್ರೇರಣೆಯಿಂದ ಸುಮಾರು 20 ದಿನಗಳವರೆಗೆ ಕಡಿದಾಕುವ ಮೂಲಕ ಸ್ವಚ್ಛಗೊಳಿಸಿದ್ದರು.
ಇದೀಗ ನಗರಸಭೆ ಕೆರೆ ಒಡ್ಡಿನ ಮೇಲೆ ಪಾದಚಾರಿ ಸುಗಮಕ್ಕೆ ಸಿಸಿ ರಸ್ತೆ ನಿರ್ಮಿಸುವ ಅನುಕೂಲ ಕಲ್ಪಿಸಲಾಗಿದೆ. ಮಾವಿನ ಕೆರೆ ಮೇಲಿಂದ ಕೊನೆಯ ಹಂತದಲ್ಲಿ ಬುದ್ಧ ಮಲಗಿರುವ ದೃಶ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಹೀಗಾಗಿ ಜನ ಈ ಸುಂದರ ತಾಣ ವೀಕ್ಷಿಸಿ ಶ್ರೀ ಬುದ್ಧ ಮಲಗಿದ ದೃಶ್ಯ ನೋಡಿ ಪುಳಕಿತರಾಗುತ್ತಿರುವದು ಕಂಡು ಬರುತ್ತಿದೆ. ಈ ಕ್ಷೇತ್ರ ಇನ್ನೂ ಸಾಕಷ್ಟು ಅಭಿವೃದ್ಧಿ ಆಗಬೇಕಿದೆ.
ಉದ್ಯಾನವನ, ವಿದ್ಯುತ್ ದೀಪಾಲಂಕಾರ ಮತ್ತು ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಇನ್ನುಳಿದ ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ ಆ ನಿಟ್ಟಿನಲ್ಲಿ ರಾಜಕೀಯ ಇಚ್ಛಾಶಕ್ತಿ ಅಗತ್ಯವಿದೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ತಾಣ ಅಭಿವೃದ್ಧಿಗೆ ಪಣ ತೊಡಬೇಕಿದೆ.
ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದಲ್ಲಿ ಈ ಬುದ್ಧ ಮಲಗಿದ ದೃಶ್ಯತಾಣ ವಿಶ್ವಮಾನ್ಯ ಪಡೆಯುವದರಲ್ಲಿ ಯಾವುದೇ ಸಂದೇಹವಿಲ್ಲ. ಅಂದ ಹಾಗೇ ಈ ತಾಣವಿರುವ ಮಾಹಿತಿಯೇ ಹೇಳೋದು ಮರೆತಿದ್ದೆ. ಇದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿದೆ.
– ಮಲ್ಲಿಕಾರ್ಜುನ ಮುದ್ನೂರ.