ಹಿರಿಯ ವಿದ್ಯಾರ್ಥಿನಿಯರು ಕಿರಿಯರಿಗೆ ಪುಸ್ತಕಗಳಿಂದ ಉಡಿ ತುಂಬಿ ಸ್ವಾಗತಿಸಿದರು
ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ:ದಿಗ್ಗಿ
ಶಹಾಪುರ: ಪದವಿಯಲ್ಲಿ ಕೇವಲ ಪಠ್ಯಕ್ರಮ ಅಭ್ಯಸಿಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುವುದಷ್ಟೇ ವಿದ್ಯಾರ್ಥಿಗಳ ಗುರಿಯಾಗಬಾರದು. ಪಠ್ಯೇತರ ಚಟುವಟಿಕೆಗಳಾದ ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ, ನಾಟಕ, ಎನ್ನೆಸ್ಸೆಸ್ ಸೇರಿದಂತೆ ಕ್ರೀಡೆ ಮುಂತಾದ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಉತ್ತಮ ವ್ಯಕ್ತಿತ್ವ ಮತ್ತು ಉಜ್ವಲ ಭವಿಷ್ಯ ನಿರ್ಮಾಣ ಸಾಧ್ಯ ಎಂದು ಸುರಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹಾಯಕ ಪ್ರಾಧ್ಯಾಪಕ ಪ್ರೊ. ಸಿದ್ದಪ್ಪ ದಿಗ್ಗಿ ತಿಳಿಸಿದರು.
ನಗರದ ಬಾಪುಗೌಡ ದರ್ಶನಾಪೂರ ಸ್ಮಾರಕ ಮಹಿಳಾ ಪದವಿ ಕಾಲೇಜಿನಲ್ಲಿ ಮಡೆದ 2017-18 ನೇ ಸಾಲಿನ ಸಾಂಸ್ಕೃತಿಕ, ಎನ್ನೆಸ್ಸೆಸ್ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಬಿ.ಎ.ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹೊಸ ಹೊಸತಾದ ವಿಚಾರಗಳು, ಜ್ಞಾನದ ಶಿಸ್ತುಗಳು, ಸಂಶೋಧನೆಗಳು ಜೀವನಕ್ಕೆ ಹೊಸ ರೂಪಗಳನ್ನು ಕೊಡುತ್ತವೆ. ಇವುಗಳೊಂದಿಗೆ ಸ್ಪಂಧಿಸದೆ ಇರುವುದಕ್ಕೆ ಸಾಧ್ಯವಿಲ್ಲ. ಅದರಲ್ಲಿಯೂ ಭಾವಿ ನಾಗರಿಕರಾಗಲಿರುವ ವಿದ್ಯಾರ್ಥಿ ಯುವ ಪೀಳಿಗೆಯು ಹಿಂದೆಂದಿಗಿಂತಲೂ ಹೆಚ್ಚು ಸಂವೇದನಾಶೀಲರಾಗಿ ಕಾಲೇಜಿನ ಪಠ್ಯ ಮತ್ತು ಪಠ್ಯತರ ಚಟುವಟಿಕೆಗಳಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ಪ್ರಾಚಾರ್ಯ ಶರಣಗೌಡ ಬಿರಾದಾರ ಮಾತಾನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ, ಸಾಮಥ್ರ್ಯ, ಕಲೆ ಮತ್ತು ಅವರಲ್ಲಿ ಅವಿತುಕೊಂಡಿರುವ ಭಾವನೆಗಳನ್ನು ಮೇಲ್ಪದರಿಗೆ ತರಲು ಪಠ್ಯೇತರ ಚಟುವಟಿಕೆಗಳು ಸೂಕ್ತವಾದ ವೇದಿಕೆಯನ್ನು ಕಲ್ಪಿಸಿಕೊಡುತ್ತವೆ ಎಂದರು.
ಪ್ರಾಂಶುಪಾಲ ಪ್ರೊ.ಶಿವಲಿಂಗಣ್ಣ ಸಾಹು ಅಧ್ಯಕ್ಷತೆವಹಿಸಿದ್ದರು. ಚರಬಸವೇಶ್ವರ ಪ್ರೌಢ ಶಾಲೆಯ ಮುಖ್ಯ ಗುರು ಬಾಪುಗೌಡ ಅಸಂತಾಪೂರ, ಹಿರಿಯ ಕನ್ನಡ ಅದ್ಯಾಪಕ ಸೈಯ್ಯದ್ ಚಾಂದಪಾಶ, ಎನ್ನೆಸ್ಸೆಸ್ ಘಟಕದ ಅಧಿಕಾರಿ ಸಂಗಣ್ಣ ದಿಗ್ಗಿ, ಸಾಂಸ್ಕøತಿಕ ಅಧಿಕಾರಿ ದೇವಿಂದ್ರಪ್ಪ ಆಲ್ದಾಳ, ನರ್ಮದಾ ತುಳೇರ, ವಿಧ್ಯಾರ್ಥಿ ಪ್ರತಿನಿಧಿಗಳಾದ ಚಂದ್ರಕಲಾ, ಶ್ವೇತಾ, ಶಿವಲೀಲಾ, ಪ್ರತಿಭಾ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಅಧಿಕಾರಿ ಭೀಮರಾಯ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್ನೆಸ್ಸೆಸ್ ಬಿ. ಘಟಕದ ಅಧಿಕಾರಿ ಶುಭಲಕ್ಷ್ಮಿ ಬಬಲಾದಿ ಪ್ರತಿಜ್ಞಾ ವಿಧಿ ಬೋಧಿಸಿದರು.
ವಿದ್ಯಾರ್ಥಿನಿಯರಾದ ಭಾಗಿರತಿ, ಪ್ರತಿಭಾ ನಿರೂಪಿಸಿದರು. ಚಂದ್ರಕಲಾ, ನಂದಿನಿ ಪ್ರಾರ್ಥಿಸಿದರು. ಅಕ್ಕಮಹಾದೇವಿ ಮತ್ತು ಯಲ್ಲಮ್ಮ ಸ್ವಾಗತಿಸಿದರು. ಶ್ವೇತಾ ವಂದಿಸಿದರು.
ಪುಸ್ತಕಗಳಿಂದ ಉಡಿ ತುಂಬುವ ಕಾರ್ಯಕ್ರಮ
ಬಿ.ಎ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಎಲ್ಲಾ ಪ್ರಥಮ ವರ್ಷ ವಿದ್ಯಾರ್ಥಿನಿಯರಿಗೆ ಪುಸ್ತಕಗಳಿಂದ ಉಡಿ ತುಂಬಿ ಆರತಿ ಮಾಡುವ ಮೂಲಕ ಅವರನ್ನು ಬರ ಮಾಡಿಕೊಂಡರು.
ಈ ವಿನೂತನ ಕಾರ್ಯಕ್ಕೆ ಚಾಲನೆ ದೊರೆತಿರುವುದು ವಿದ್ಯಾರ್ಥಿನಿಯರಲ್ಲಿ ಹೊಸ ಭರವಸೆ ಮೂಡಿಸಿತು. ಪುಸ್ತಕಗಳ ಮೂಲಕ ಜ್ಞಾನವಂತರಾಗಿ ಸಮಾಜಕ್ಕೆ ಬೆಳಕು ನೀಡುವ ಯುಕ್ತಿವಂತರಾಗಲಿ ಎಂಬ ಸಂದೇಶವನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಪುಸ್ತಕಗಳ ಉಡಿ ತುಂಬಿ ಆರತಿ ಬೆಳಗಿ ಸ್ವಾಗತಿಸಿದ ಹಿರಿಯ ವಿದ್ಯಾರ್ಥಿಗಳ ಕಾರ್ಯ ವೈಶಿಷ್ಟ್ಯತೆಯಿಂದ ಕೂಡಿತ್ತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ, ಸಂಗೀತ, ಹಾಸ್ಯ ವಿವಿಧ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭದಲ್ಲಿ ಅಕ್ಕಮಹಾದೇವಿ ಛದ್ಮವೇಶ ಧರಿಸಿದ ವಿಧ್ಯಾರ್ಥಿನಿ ಪ್ರೀತಿ ವೇದಿಕೆ ಮೇಲೆ ಹಾಜರಿರುವ ಮೂಲಕ ಎಲ್ಲರ ಗಮನ ಸೆಳೆದರು.