ದಿನಕ್ಕೊಂದು ಕಥೆ
ಎಷ್ಟು ಸಂಪತ್ತಿದ್ರೆ ಏನು? ತಿನ್ನುವುದು ರೈತ ಬೆಳೆದ ಅಕ್ಕಿ.
ಒಂದು ದಿನ ವ್ಯಾಪಾರಿ ಗೋದಾಮಿನಿಂದ ಅಕ್ಕಿಯ ಮೂಟೆಯನ್ನು ಆಳಿನ ಹೆಗಲಮೇಲೆ ಹೊರಿಸಿ ಅಂಗಡಿಗೆ ಹೊರಟಿದ್ದ. ಮೂಟೆಯಲ್ಲಿ ಸಣ್ಣರಂಧ್ರವಿತ್ತು. ದಾರಿಯಲ್ಲಿ ಸ್ವಲ್ಪ ಸ್ವಲ್ಪವೇ ಅಕ್ಕಿ ಚೆಲ್ಲುತ್ತಿತ್ತು. ಅದನ್ನು ವ್ಯಾಪಾರಿ ರುಮಾಲಿನಲ್ಲಿ ಕಟ್ಟಿಕೊಳ್ಳುತ್ತಿದ್ದ. ಆ ಸಮಯದಲ್ಲಿ ಒಬ್ಬ ದಾರಿಹೋಕ “ಏನ್ ಸ್ವಾಮಿ, ನೀವು ದೊಡ್ಡ ಸಾಹುಕಾರರು. ಚೆಲ್ಲಿದ ಅಕ್ಕಿಯನ್ನು ಚಿನ್ನ ಬಿದ್ದಂಗೆ ಕಟ್ಟಿಕೊಳ್ಳುತ್ತಿದ್ದೀರಿ” ಎಂದು ಕೇಳಿದ.
ವ್ಯಾಪಾರಿ ನಕ್ಕು ಆತನನ್ನು ಅಂಗಡಿ ಒಳಗೆ ಕರೆದು ಕೂರಿಸಿದ. ಮರುದಿನ ತಮ್ಮ ಮನೆಯಲ್ಲಿ ಪೂಜೆಯಿದ್ದು, ಮಧ್ಯಾಹ್ನ ಊಟಕ್ಕೆ ಬರಲು ಆಹ್ವಾನಿಸಿದ. ದಾರಿಹೋಕ ಒಪ್ಪಿದ.
ಮಾರನೇ ದಿನ ಆ ದಾರಿಹೋಕ ಪೂಜೆಗೆ ಬಂದಾಗ ವ್ಯಾಪಾರಿ ಆತನನ್ನು ಸತ್ಕರಿಸಿದ. ಬಂಗಾರ ತಟ್ಟೆಯನ್ನಿಟ್ಟು ಊಟಕ್ಕೆ ಕುಳ್ಳಿರಿಸಿದ. ವ್ಯಾಪಾರಿಯ ಪತ್ನಿಯು ಒಂದಿಷ್ಟು ಬಂಗಾರದ ಅಕ್ಕಿಯನ್ನು ತಟ್ಟೆಗೆ ಬಡಿಸಿದಳು. ನಂತರ “ದಯಮಾಡಿ ಊಟ ಮಾಡಬೇಕು” ಎಂದು ಇಬ್ಬರೂ ಕೈ ಜೋಡಿಸಿ ನಿಂತರು. ಆತ ತಬ್ಬಿಬ್ಟಾದ. “ಏನ್ ಸಾಹುಕಾರ್ರೆ… ಬಂಗಾರದ ಅಕ್ಕಿ ಬಡಿಸಿ ತಿನ್ನಿ ಅಂತೀರಲ್ಲ” ಎಂದ.
ಆಗ ವ್ಯಾಪಾರಿ “ನಿನ್ನೆ ನೀವೇ ಅಂದಿದ್ರಲ್ಲ. ಇಷ್ಟು ದೊಡ್ಡ ಶ್ರೀಮಂತ ನಾನು. ಸ್ವಲ್ಪ ಅಕ್ಕಿ ಚಿನ್ನದಾಂಗ ಕಟ್ಟಿಕೊಂಡ್ರಿ ಅಂತ. ಎಷ್ಟು ಸಂಪತ್ತಿದ್ರೆ ಏನ್ ಬಂತು? ಆ ರೈತ ಬೆವರು ಸುರಿಸಿ ಬೆಳೆಯಬೇಕು. ಭೂಮಾತೆ ಕೃಪೆ ಮಾಡಿ ನೀಡಬೇಕು. ಆಗ ಮಾತ್ರ ನಮ್ಮ ಬದುಕಲ್ವೆ?” ಎಂದನು.
ದಾರಿಹೋಕನ ಕಣ್ಣುಗಳು ತೇವಗೊಂಡವು. ಅಷ್ಟರಲ್ಲಿ ಸಾಹುಕಾರನ ಪತ್ನಿ ಬಾಳೆಲೆಯಿಟ್ಟು ಕ್ರಮವಾಗಿ ಮೃಷ್ಟಾನ್ನ ಬಡಿಸಿದಳು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.