ಅಭ್ಯಾಸ ಬಲ ಸತ್ತ ಮೇಲೂ ಬಿಡುವುದಿಲ್ಲ !
ಅಭ್ಯಾಸ ಬಲ ಸತ್ತ ಮೇಲೂ ಬಿಡುವುದಿಲ್ಲ !
ಇದೊಂದು ನಿಜಜೀವನದ ಕತೆ! ಬಹಳ ಹಿಂದೆ ಅಂದರೆ ಹದಿನಾರನೆಯ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಏನಾಥ್ ಮಹಾರಾಜರು (1533-1599) ಎಂಬ ಸಂರಿದ್ದರು. ಅವರು ‘ಶ್ರೀಮದ್ ಭಾಗವತಮ್’ ಮೇಲೆ ಬಹಳ ಉತ್ತಮವಾದ ವ್ಯಾಖ್ಯಾನ ಬರೆದಿದ್ದಾರೆ.
ಏಕನಾಥ್ ಅವರು ಪ್ರತಿನಿತ್ಯ ಭಾಗವತದಲ್ಲಿರುವ ಕತೆಗಳನ್ನು ಆಧರಿಸಿ ಪ್ರವಚನವನ್ನು ನೀಡುತ್ತಿದ್ದರು. ಅವರ ಪ್ರವಚನವನ್ನು ಕೇಳಲು ಆ ಊರಿನಲ್ಲಿರುವವರೆಲ್ಲ ಬರುತ್ತಿದ್ದರು. ಆದರೆ ಅದೇ ಊರಿನಲ್ಲಿದ್ದ ಕುಲರ್ಣಿ ಎಂಬ ಜಮೀನುದಾರರು ಮಾತ್ರ ಎಂದೂ ಪ್ರವಚನ ಕೇಳಲು ಬರುತ್ತಿರಲಿಲ್ಲ.
ಇದನ್ನು ಗಮನಿಸಿದ ಏಕನಾಥರು ಒಂದು ದಿನ ಹೋಗಿ ಜಮೀನುದಾರನನ್ನು ಭೇಟಿಯಾದರು. ಅವರು ಜಮೀನುದಾರರನ್ನು ನಿಮ್ಮನ್ನು ಬಿಟ್ಟು ಊರಿನಲ್ಲಿರುವ ಜನರೆಲ್ಲರೂ ನನ್ನ ಪ್ರವಚನವನ್ನು ಕೇಳಲು ಬರುತ್ತಾರೆ. ನೀವೇಕೆ ಬರುವುದಿಲ್ಲ? ಎಂದು ಕೇಳಿದರು.
ಜಮೀನುದಾರರು ಓಹ್ ಮಹಾರಾಜರೇ, ನಾನು ಸುತ್ತಮುತ್ತಲ ಪಟ್ಟಣಗಳಲ್ಲಿ ಆಸ್ತಿ ಹೊಲ ಗದ್ದೆಗಳನ್ನು ಹೊಂದಿದ್ದೇನೆ. ಎಲ್ಲಾ ಪಟ್ಟಣಗಳಿಗೆ ಹೋಗಬೇಕು. ಆಸ್ತಿಪಾಸ್ತಿಗಳನ್ನು ನೋಡಿಕೊಳ್ಳಬೇಕು, ಬಿಡುವಿಲ್ಲದಷ್ಟು ಕೆಲಸ. ಇದರ ಮಧ್ಯೆ ನನಗೆ ಹೇಗೆ ಬರಲು ಸಾಧ್ಯವಾಗುತ್ತದೆ? ಎಂದರು.
ಏಕನಾಥರು ನೀನು ಸಾಯುವ ಸಮಯದಲ್ಲಿ ನಿನ್ನ ಏಳು ಪಟ್ಟಣದಲ್ಲಿನ ಆಸ್ತಿ ಪ್ರಯೋಜನಕ್ಕೆ ಬರುತ್ತದೆಯೇ? ಎಂದು ಕೇಳಿದರು. ಏಕನಾಥರ ಈ ಹರಿತವಾದ ಮಾತುಗಳು ಜಮೀನುದಾರರ ಎದೆ ನಾಟಿದಂತಾಯಿತು.
ಚಿಂತಾಕ್ರಾಂತರಾದ ಜಮೀನುದಾರರು ಕೊಂಚ ಹೊತ್ತು ಸುಮ್ಮನೆ ಕುಳಿತರು. ಆನಂತರ ಸಾವರಿಸಿಕೊಂಡು ಈಗ ನಾನೇನು ಮಾಡಲಿ? ಕೇಳಿದರು. ಏಕನಾಥರು ನಿಮಗೆ ಹಗಲಿನ ಹೊತ್ತಿನಲ್ಲಿ ಯಾವಾಗ ಬಿಡುವಿರುತ್ತದೆ? ಎಂದು ಕೇಳಿದರು. ಜಮೀನುದಾರರು ನನಗೆ ಬಿಡುವಿನ ಸಮಯವೇ ಸಿಗುವುದಿಲ್ಲವೆಂದರು.
ಏಕನಾಥರು ನೀವು ಪ್ರತಿನಿತ್ಯವೂ ಸ್ನಾನವನ್ನು ಮಾಡುತ್ತೀರಲ್ಲವೇ? ಎಂದರು. ಜಮೀನುದಾರರು ಹೌದೆಂದರು. ಪುರಾತನ ಭಾರತದಲ್ಲಿ ಆಗ ಒಂದು ಪದ್ಧತಿ ಇತ್ತು. ಅದೇನೆಂದರೆ ಪ್ರತಿಯೊಬ್ಬರು ನದಿಯಲ್ಲಿ ಹೋಗಿ ಸ್ನಾನ ಮಾಡಿ ಬರುತ್ತಿದ್ದರು.
ಏಕನಾಥರು ಪ್ರತಿದಿನ ನೀವು ನದಿಯಲ್ಲಿ ಸ್ನಾನ ಮಾಡುವಾಗ, ಮೈಮೇಲೆ ನೀರು ಸುರಿದುಕೊಳ್ಳುವಾಗ, ಶ್ರೀಮದ್ ಭಾಗವತದಲ್ಲಿರುವ ಈ ಐದು ಮಂತ್ರಗಳನ್ನು ಇಷ್ಟು ಸಾಕು ಎಂದರು. ಜಮೀನುದಾರರು ಹಾಗೆಯೇ ಆಗಲಿ ಎಂದು ಒಪ್ಪಿದರು.
ಅಂದಿನಿಂದ ಪ್ರತಿನಿತ್ಯ ಜಮೀನುದಾರರು ಸ್ನಾನ ಮಾಡುವಾಗ, ಮೈಮೇಲೆ ನೀರು ಸುರಿದುಕೊಳ್ಳುವಾಗ, ಆ ಐದು ಮಂತ್ರಗಳನ್ನು ಹೇಳಿಕೊಳ್ಳುತ್ತಿದ್ದರು. ಹೀಗೆಯೇ ಎಷ್ಟೋ ವರ್ಷಗಳು ಕಳೆದವು. ಒಂದು ದಿನ ಅವರು ಅಸುನೀಗಿದರು. ಜಮೀನುದಾರರ ಸಂಬಂಧಿಕರೆಲ್ಲರೂ ಅವರ ಕೊನೆಯ ದರ್ಶನಕ್ಕಾಗಿ ಬಂದಿದ್ದರು.
ಅಂತಿಮ ಸಂಸ್ಕಾರದ ವಿಧಿವಿಧಾನಗಳಲ್ಲಿ ಒಂದಾದ ಮೃತ ದೇಹಕ್ಕೆ ಸ್ನಾನ ಮಾಡಿಸಲು ಮೃತದೇಹವನ್ನು ಹೊರಗಡೆಗೆ ಎತ್ತಿಕೊಂಡು ಬಂದರು. ಸ್ನಾನ ಮಾಡಿಸಲು ಮುಂದಾದರು. ಒಂದು ವಿಶೇಷ ಘಟನೆಯೊಂದು ಸಂಭವಿಸಿತು.
ಮೃತದೇಹದ ಮೇಲೆ ನೀರು ಸುರಿದ ತಕ್ಷಣ ಮೃತದೇಹವು ಎದ್ದು ಕುಳಿತುಕೊಂಡಿತಂತೆ! ಮತ್ತೆ ಶ್ರೀಮದ್ ಭಾಗವತದ ಶ್ಲೋಕಗಳನ್ನು ಹೇಳಲಾರಂಭಿಸಿತಂತೆ!
ಜಮೀನುದಾರರು ಏಕನಾಥರಿಂದ ಉಪದೇಶಿಸಲ್ಪಟ್ಟಿದ್ದ ಐದು ಮಂತ್ರಗಳನ್ನು ಹಲವಾರು ವರ್ಷಗಳು ಪ್ರತಿನಿತ್ಯವೂ ಪಠಿಸಿ ಅಭ್ಯಾಸ ಮಾಡಿದ್ದುದರ ಫಲವಾಗಿ ಆ ಮಂತ್ರಗಳು ಅವರ ದೇಹ-ಮನಸ್ಸು-ಬುದ್ಧಿಗಳನ್ನು ಪೂರ್ಣಪ್ರಮಾಣದಲ್ಲಿ ಆವರಿಸಿಕೊಂಡಿದ್ದವೇನೋ? ಅವರ ಅಭ್ಯಾಸಬಲದಿಂದಾಗಿ ಇಂತಹ ಪವಾಡ ನಡೆಯಿತಾದರೆ, ಸಿದ್ಧಿಗಳನ್ನು ಪಡೆಯಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವವರು, ಹಲವಾರು ಬಗೆಯ ಸಾಧನೆಗಳನ್ನು ಮಾಡಿರುವವರ ಎಂತೆಂತಹ ಪವಾಡಗಳು ನಡೆದಿರಬಹುದೆಂಬುದನ್ನು ನಾವೇ ಯೋಚಿಸಿ ನೋಡಬಹುದಲ್ಲವೇ? ಪವಾಡಗಳನ್ನು ನಾವು ನಂಬಲಿ, ಬಿಡಲಿ, ಅಭ್ಯಾಸ ಬಲದ ಪರಿಣಾಮಗಳನ್ನು ನಾವೆಲ್ಲಾ ನೋಡಿದ್ದೇವಲ್ಲವೇ
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882