ಪ್ರಮುಖ ಸುದ್ದಿ

ಬದುಕಿನ ಕೊಳದಲ್ಲಿ ಶಾರ್ಕ್‌ ಮೀನಿರಲಿ.! ಅದ್ಭುತ ಕಥೆ ಓದಿ

ಬದುಕಿನ ಕೊಳದಲ್ಲಿ ಶಾರ್ಕ್‌

ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರು ತಿಳಿಸಿದ ಸಂಗತಿ ಇದು. ಜಪಾನೀಯರಿಗೆ ತಾಜಾ ಮೀನೆಂದರೆ ಬಲು ಇಷ್ಟ. ಆದರೆ ಜಪಾನ್‌ ಕರಾವಳಿ ಪ್ರದೇಶದಲ್ಲಿ ಮೀನುಗಳು ಬಹಳ ಕಡಿಮೆ. ತುಂಬ ವರ್ಷಗಳಿಂದ ಅಲ್ಲಿ ಮೀನುಗಳನ್ನು ಹಿಡಿ­ಯು­­ತ್ತಿ­­ದ್ದರಿಂದ ಹೀಗಾಗಿರಬೇಕು.

ಆದ್ದರಿಂದ ಮೀನುಗಾರರು ಮೀನು ಹಿಡಿ­ಯಲು ಸಮುದ್ರದ ಆಳಕ್ಕೆ ಹೋಗಬೇಕಾಗುತ್ತದೆ. ಅಷ್ಟು ದೂರ ಹೋಗಿ ಸ್ವಲ್ಪವೇ ಮೀನು ತಂದರೆ ಅದು ಹೆಚ್ಚು ಆದಾಯವನ್ನು ತರುವುದಿಲ್ಲ. ಅದಕ್ಕೆಂದೇ ಅವರು ದೊಡ್ಡ, ಅತಿ ದೊಡ್ಡ ನಾವೆಗಳನ್ನು ಮಾಡಿಕೊಂಡಿದ್ದಾರೆ.

ಈ ನಾವೆಗ­ಳಲ್ಲಿ ಸಮುದ್ರದಲ್ಲಿ ಅತ್ಯಂತ ದೂರದವರೆಗೆ ಹೋಗಿ ರಾಶಿ ರಾಶಿ ಮೀನುಗಳನ್ನು ಹಿಡಿದು ತರುತ್ತಾರೆ. ಇವರು ದೂರ ಹೋದಷ್ಟು ಮರಳಿ ಬರುವುದರಲ್ಲಿ ತಡ­ವಾಗುತ್ತಿತ್ತು. ಗ್ರಾಹ­ಕರು ಮನೆ ಸೇರುವಷ್ಟರಲ್ಲಿ ಮೀನುಗಳು ತಾಜಾ ಆಗಿ ಉಳಿ­ಯುತ್ತಿರಲಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಮೀನುಗಾರರು ತಮ್ಮ ನಾವೆ­ಗಳಲ್ಲಿ ದೊಡ್ಡ ದೊಡ್ಡ ಶೈತ್ಯಾಗಾರಗಳನ್ನು ನಿರ್ಮಿಸಿ ತಾವು ಹಿಡಿದ ಮೀನು­ಗಳನ್ನು ಅವುಗಳಲ್ಲಿ ಹಾಕಿಡು­ತ್ತಿದ್ದರು.

ಹೀಗೆ ಮೀನುಗಳು ತಾಜಾ ಇರುವಂತೆ ನೋಡಿಕೊಳ್ಳುತ್ತಿದ್ದರು. ಆದರೆ ಜಪಾನೀಯರಿಗೆ ತಾಜಾ ಮೀನಿನ ಹಾಗೂ ಶೈತ್ಯಾ­ಗಾರದ ಮೀನುಗಳ ವ್ಯತ್ಯಾಸ ಬೇಗನೇ ತಿಳಿಯುತ್ತಿತ್ತು. ಮರಗ­ಟ್ಟಿಸಿದ ಮೀನುಗಳ ರುಚಿ ಕಡಿಮೆ. ಹೀಗಾಗಿ ಅವುಗಳ ಬೆಲೆಯೂ ಕಡಿಮೆ­ಯಾಗುತ್ತಿತ್ತು.

ಇದಕ್ಕೂ ಒಂದು ಪರಿಹಾರವನ್ನು ಕಂಡುಕೊಳ್ಳಲು ಮೀನುಗಾ­ರರು ಪ್ರಯತ್ನಿಸಿ­ದರು. ಈ ಬಾರಿ ಅವರು ಶೈತ್ಯಾಗಾ­ರದ ಬದಲಾಗಿ ದೊಡ್ಡ ನೀರಿನ ಟ್ಯಾಂಕುಗ­ಳನ್ನು ಇರಿಸಿ­ಕೊಂಡು ಹಿಡಿದ ಮೀನು­ಗಳನ್ನು ಜೀವಂತವಾಗಿಯೇ ಟ್ಯಾಂಕಿನಲ್ಲಿ ಇಟ್ಟು ದಡಕ್ಕೆ ತರುತ್ತಿ­ದ್ದರು. ಆದರೆ ಈ ಮೀನುಗಳಿಗೂ ತಾಜಾ ಮೀನಿನ ದರವನ್ನು ಜನ ಕೊಡು­ತ್ತಿರ­ಲಿಲ್ಲ.

ಯಾಕೆಂದರೆ ಟ್ಯಾಂಕುಗಳಲ್ಲಿದ್ದ ಸಾವಿರಾರು ಮೀನುಗಳು ವಿಶಾಲ­ವಾದ ಸಮುದ್ರದಿಂದ ಬಂದ­ವು­ಗಳು. ಈ ಇಕ್ಕಟ್ಟಿನ ಸ್ಥಾನದಲ್ಲಿ ಅವು­ಗಳಿಗೆ ಉಸಿರುಕ­ಟ್ಟಿದಂತಾಗುತ್ತಿತ್ತು. ಸ್ವಚ್ಛವಾಗಿ ಈಜಲಾರದೇ ಸ್ವಲ್ಪ ಹೊತ್ತಿಗೇ ಸುಸ್ತಾಗಿ ಬಿದ್ದು ಸತ್ತು ಹೋಗುತ್ತಿದ್ದವು. ಈ ಮೀನುಗಳ ರುಚಿಯೂ ಕಡಿಮೆಯೇ.

ಈ ಕಾರಣಗಳಿಂದಾಗಿ ತಮ್ಮ ಜನರಿಗೆ ತಾಜಾ ಮೀನುಗಳನ್ನು ನೀಡುವುದು ಹೇಗೆ ಎನ್ನುವುದೇ ಬಹುದೊಡ್ಡ ಸವಾಲಾಗಿತ್ತು.

ಜಪಾನೀಯರು ಇದ­ಕ್ಕೊಂದು ಪರಿಹಾರ ಕಂಡುಹಿಡಿದಿದ್ದಾರೆ. ಅದು ಹೇಗೆ ಗೊತ್ತೇ? ಹಡಗುಗಳಲ್ಲಿ ಈಗಲೂ ನೀರಿನ ಟ್ಯಾಂಕುಗಳಿವೆ. ಹಿಡಿದ ಮೀನುಗಳನ್ನು ಅವುಗಳಲ್ಲಿಯೇ ಹಾಕು­ತ್ತಾರೆ. ಆದರೆ ಆ ಮೀನುಗಳ ಜೊತೆಯಲ್ಲಿ ಪ್ರತಿ ಟ್ಯಾಂಕಿನಲ್ಲೂ ಒಂದೆರಡು ಶಾರ್ಕ್‌ ಮೀನುಗಳನ್ನು ಹಾಕುತ್ತಾರೆ.

ಈ ಶಾರ್ಕ್‌ಗಳು ಉಗ್ರವಾದ­ವುಗಳು, ಮೀನು­ಗಳನ್ನು ಬೆನ್ನಟ್ಟಿ ಕೊಂದು ತಿನ್ನುತ್ತವೆ. ತಮ್ಮ ಟ್ಯಾಂಕಿನಲ್ಲಿದ್ದ ಶಾರ್ಕ್‌ಗಳಿಂದ ತಪ್ಪಿಸಿಕೊಳ್ಳಲು ಉಳಿದ ಮೀನುಗಳು ಚುರುಕಾಗಿರ­ಬೇಕಾಗು­ತ್ತದೆ.

ಒಂದು ಕ್ಷಣ ಮೈಮರೆತರೂ ಪ್ರಾಣ ಹೋಗಿ ಬಿಡುತ್ತದೆ. ಸದಾ ಎಚ್ಚ­ರಿಕೆಯ ಈ ಜೀವನ ಅವು­ಗ­ಳನ್ನು ತಾಜಾ ಆಗಿಯೇ ಇಡುತ್ತದೆ, ಅಂದರೆ ಸವಾಲಿನ ಮುಖದಲ್ಲಿ ಮೀನು­ಗಳು ಸದಾ ಕಾಲ ಓಡಾಡುತ್ತ, ಚುರುಕಾಗಿದ್ದು ತಾಜಾ ಆಗಿ ಉಳಿದಿದ್ದವು. ನಾವೂ ನಮ್ಮ ನಮ್ಮ ಬದುಕಿನ ಟ್ಯಾಂಕ್‌ಗಳಲ್ಲಿ ಎಷ್ಟೋ ಬಾರಿ, ಸುಸ್ತಾಗಿ, ನಿರ್ವೀ­ರ್ಯರಾಗಿ, ಕೈ ಚೆಲ್ಲಿ ಕುಳಿತುಕೊಳ್ಳುತ್ತೇವೆ.

ಸಾಕಪ್ಪ, ಇನ್ನೇಕೆ ಒದ್ದಾಟ ಎಂದು­ಕೊಂಡು ಹಳತಾಗು­ತ್ತೇವೆ. ಹಾಗಾದರೆ ನಾವು ತಾಜಾ ಆಗಿಯೇ ಇರ­ಬೇಕಾದರೆ ಏನು ಮಾಡಬೇಕು? ಸವಾಲುಗಳನ್ನು ಎದುರಿಸಬೇಕು. ಸವಾಲು­ಗಳು ಇಲ್ಲದಿದ್ದರೆ ಸೃಷ್ಟಿಸಿಕೊಳ್ಳಬೇಕು.

ಅವು ಇದ್ದಾಗ ನಾವು ಚುರುಕಾ­ಗುತ್ತೇವೆ, ಹೊಸ­ತಾ­ಗು­ತ್ತೇವೆ, ಹಳಸುವುದಿಲ್ಲ, ಬದುಕು ರಸಹೀನವಾಗುವುದಿಲ್ಲ. ದಯ­ವಿಟ್ಟು ನಿಮ್ಮ ಜೀವನದ ಕೊಳದಲ್ಲಿ ಒಂದು ಶಾರ್ಕ್‌  ಬಿಟ್ಟುಕೊಳ್ಳಿ, ಸದಾ ತಾಜಾ ಆಗಿ ಇರಿ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button