ಕಥೆ

ಹಣದ ಚೀಲ ಮಕ್ಕಳ ಕೈಗೆ ನೀಡಿ, ನಡೆ ಪರೀಕ್ಷಿಸಿದ ತಂದೆ

ದಿನಕ್ಕೊಂದು ಕಥೆ

ಸಿರಿವಂತನ ಸಂಸಾರ

ಒಂದೂರಲ್ಲಿ ಒಬ್ಬ ಶ್ರೀಮಂತನಿದ್ದ. ಅವನಿಗೆ ಮೂರು ಮಂದಿ ಗಂಡು ಮಕ್ಕಳು. ಅವರೆಲ್ಲರೂ ತಂದೆ ಕೂಡಿಟ್ಟ ಸಂಪತ್ತನ್ನು ಖರ್ಚು ಮಾಡುವುದರಲ್ಲೇ ದಿನಗಳನ್ನು ಕಳೆಯುತ್ತಿದ್ದರು. ಇದರಿಂದ ಶ್ರೀಮಂತನಿಗೆ ತಲೆಬಿಸಿ ಹೆಚ್ಚಿತು. ತನ್ನ ಕಾಲಾನಂತರ ಹೇಗೆ ನಿಭಾಯಿಸಬಲ್ಲರು ಎಂದು ತಿಳಿಯಲೋಸುಗ ಒಂದು ಪರೀಕ್ಷೆಗೆ ಮುಂದಾದ.

ಒಂದು ದಿನ ಮೂವರನ್ನೂ ಕರೆದು “ನನ್ನ ಸಂಪತ್ತನ್ನು ನೀವೇ ತಾನೇ ಚೆನ್ನಾಗಿ ರಕ್ಷಿಸಬೇಕಾದವರು ಇನ್ನು ಮುಂದೆ?” ಹೌದು ಎಂದು ಎಲ್ಲರೂ ಹೇಳಿದರು. ಶ್ರೀಮಂತ ದೊಡ್ಡ ಮಗನನ್ನು ಕರೆದು ಮೂರು ಚೀಲ ಚಿನ್ನದ ನಾಣ್ಯ, ಎರಡನೆಯ ಮಗನಿಗೆ ಎರಡು ಚೀಲ ಚಿನ್ನದ ನಾಣ್ಯ ಹಾಗೂ ಕೊನೆಯ ಮಗನಿಗೆ ಒಂದು ಚೀಲ ಚಿನ್ನದ ನಾಣ್ಯಗಳನ್ನು ನೀಡಿದ. ಆರು ತಿಂಗಳು ನಾನು ತೀರ್ಥಯಾತ್ರೆಗೆ ಹೋಗುವೆ. ನೀವು ನಿಮಗೆ ಇಷ್ಟ ಬಂದಂತೆ ಈ ಹಣವನ್ನು ಖರ್ಚು ಮಾಡಬಹುದು ಎಂದು ಸ್ಪೂರ್ತಿ ತುಂಬಿದ.

ದೊಡ್ಡ ಮಗನಿಗೆ ಈ ಹಣ ಕಂಡು ಬಹಳ ಸಂತೋಷವಾಯಿತು. ನನ್ನ ತಂದೆ ಕೊಟ್ಟದ್ದು ಜಾಗ್ರತೆಯಾಗಿ ಇಟ್ಟುಕೊಳ್ಳುವೆ ಎಂದು ಬಂದೋಬಸ್ತಿನಲ್ಲಿಟ್ಟೇ ಬಿಟ್ಟ ಆತ.

ಎರಡನೇ ಮಗ ಯೋಚಿಸಿದ ಹೇಗಿದ್ದರೂ ಅಣ್ಣನಿಗೆ ಮೂರು ಚೀಲ ನಾಣ್ಯಗಳನ್ನು ಕೊಟ್ಟಿದೆ. ಮನೆಯ ಎಲ್ಲ ಹೊಣೆ ಅವನದ್ದೇ. ನಾನೇಕೆ ಚಿಂತೆ ಮಾಡಲಿ? ಎಂದು ಯೋಚಿಸಿ ಬರಿದೆ ಮೋಜು ಮಜಾ ಮಾಡುತ್ತಲೇ ದಿನ ಕಳೆದ.

ಚಿಕ್ಕವನು ನಾನು ಚಿಕ್ಕವನಾದುದರಿಂದ ಕಡಿಮೆ ಪಾಲು ನನ್ನದಾಗಿದೆ . ಆದರೆ ತಂದೆ ಮೆಚ್ಚುವಂತೆ ಮಹತ್ಕಾರವನ್ನೇ ನಾನೀಗ ಮಾಡಿ ತೋರಿಸಬೇಕು ಎಂದು ಹೊಸ ಹೊಸ ಯೋಜನೆಗಳಲ್ಲಿ ತೊಡಗಿದ.

ಆರು ತಿಂಗಳ ನಂತರ ಶ್ರೀಮಂತ ಹಿಂದಿರುಗಿ ಮೂರು ಮಕ್ಕಳನ್ನೂ ವಿಚಾರಿಸಿದ. ದೊಡ್ಡ ಮಗ ಜಾಗ್ರತೆಯಿಂದ ಎಲ್ಲವನ್ನೂ ರಕ್ಷಿಸಿದ್ದು ಕಂಡು ಶ್ರೀಮಂತನಿಗೆ ತೃಪ್ತಿಯಾಗಲಿಲ್ಲ . ಎರಡನೇ ಮಗ ಎಲ್ಲವನ್ನೂ ದುಂದು ವೆಚ್ಚ ಮಾಡಿದ್ದು ಕಂಡು ತಂದೆಗೆ ತುಂಬಾ ನಿರಾಸೆಯಾಯಿತು. ಕೊನೆಯ ಮಗ ಒಂದು ಚೀಲ ನಾಣ್ಯ ಪಡೆದು ಮೂರು ಚೀಲ ನಾಣ್ಯವನ್ನು ಸಂಪಾದಿಸಿದ್ದನ್ನು ಹೆಮ್ಮೆಯಿಂದ ಹೇಳಿಕೊಂಡ.

ಒಬ್ಬ ಮಗನಾದರೂ ಉತ್ತಮ ಎನಿಸಿಕೊಂಡನಲ್ಲ ಎಂದು ಶ್ರೀಮಂತನಿಗೆ ಸಂತೋಷವಾಯಿತು.

ನೀತಿ :– ಜೀವನ ಸಾರ್ಥಕತೆಯ ಯಶಸ್ವಿಗೆ ಹಣವಲ್ಲ ಉತ್ತಮ ಗುಣಲಕ್ಷಣಗಳು ಇದ್ದರೆ ಬದುಕು ಬೆಳಗುವುದು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button