ಕೊರೊನಾ ನಿಯಮ ಪಾಲಿಸಿ ಹೋಳಿ ಆಚರಿಸಿ – ಪಿಐ ಹಿರೇಮಠ
ಹೋಳಿ ಹಬ್ಬಃ ಶಾಂತಿ ಸಭೆ
ಶಹಾಪುರಃ ಎಲ್ಲಡೆ ರವಿವಾರ ಹೋಳಿ ಹಬ್ಬ ಆಚರಿಸಲಾಗುತ್ತಿದೆ. ಆದರೆ ಶಹಾಪುರದಲ್ಲಿ ಸೋಮವಾರ ಬಣ್ಣದಾಟ ಆಡಲಿದ್ದು, ಸರ್ವರೂ ಎಚ್ಚರಿಕೆಯಿಂದ ಮತ್ತೊಬ್ಬರಿಗೆ ತೊಂದರೆ ನೀಡದೆ ಖುಷಿಯಾಗಿ ಓಕುಳಿ ಹಬ್ಬ ಆಚರಿಸಬೇಕು. ಕೊರೊನಾ ನಿಯಮಗಳನ್ನು ಮೀರಬಾರದು. ಕಾನೂನು ನಿಯಮ ಪಾಲನೆಯೊಂದಿಗೆ ಹೋಳಿ ಹಬ್ಬ ಆಚರಿಸಬೇಕೆಂದು ನಗರ ಠಾಣೆ ಪಿಐ ಚನ್ನಯ್ಯ ಹಿರೇಮಠ ತಿಳಿಸಿದರು.
ನಗರ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದಂಗವಾಗಿ ಕರೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಕೊರೊನಾ ಹಾವಳಿ ಮತ್ತೆ ಶುರುವಾಗಿದ್ದು, ಆದಷ್ಟು ಎಲ್ಲರೂ ಎಚ್ಚರಿಕೆವಹಿಸಬೇಕು. ಕೊರೊನಾ ನಿಯಮಗಳನ್ನು ಪಾಲಿಸಬೇಕು. ಯಾವುದೇ ತೊಂದರೆ ಗಲಾಟೆಯಾಗದಂತೆ ಹಿರಿಯರು ಆಯಾ ಸಮುದಾಯದ ಮುಖಂಡರು ಜನಪ್ರತಿನಿಧಿಗಳು ನಿಗಾವಹಿಸಬೇಕು ಎಂದು ಕರೆ ನೀಡಿದರು.
ಮುಖಂಡ ಸಣ್ಣ ನಿಂಗಪ್ಪ ನಾಯ್ಕೋಡಿ ಮಾತನಾಡಿ, ಹೋಳಿ ಹಬ್ಬ ಶಾಂತಿಯುತವಾಗಿ ಆಚರಿಸಬೇಕು. ಕುಡಿದು ತೀವ್ರ ಚೀರಾಟ ಕೂಗಾಟ ಮತ್ತು ರಸ್ತೆ ಮೇಲೆ ಬಾಟಲಿಗಳನ್ನು ಹೊಡೆಯವುದು ಮಾಡಬಾರದು. ಕುಡಿದು ಹಬ್ಬ ಆಚರಿಸುವವ ಮೇಲೆ ನಿಗಾವಹಿಸಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಅಂತವರಿಂದಲೇ ಸಮುದಾಯಕ್ಕೆ ದಾಳಿ ತರುತ್ತಾರೆ. ಹಿರಿಯರೆಲ್ಲರೂ ಎಚ್ಚರಿಕೆವಹಿಸಬೇಕೆಂದು ಮನವಿ ಮಾಡಿದರು.
ಬಿಜೆಪಿ ನಗರಸಭೆ ವಿಪಕ್ಷ ನಾಯಕ ಲಾಲನಸಾಬ ಖುರೇಶಿ ಮತ್ತು ಕಾಂಗ್ರೆಸ್ ಮುಖಂಡ ಮುಸ್ತಫಾ ದರ್ಬಾನ್ ಮಾತನಾಡಿ, ಹೋಳಿ ಹಬ್ಬದಂದು ಬಹುತೇಕ ಮುಖಂಡರು ಜನಪ್ರತಿನಿಧಿಗಳು ಮೊಬೈಲ್ ಸ್ವಿಚ್ ಮಾಡಿಡುತ್ತಾರೆ. ಅಂತಹ ಕೆಲಸ ಮಾಡಬಾರದು.
ಅಂದು ಏನಾದರು ಸಮಸ್ಯೆಗಳಾದರೆ ಕೂಡಲೇ ಕಾಂಟ್ಯಾಕ್ಟ್ ಮಾಡಲು ಅನುಕೂಲವಾಗಬೇಕಾದರೆ ಎಲ್ಲರೂ ಮೊಬೈಲ್ ಆನ್ ಇಡಬೇಕು. ಬಣ್ಣ ಆಡದಿದ್ದರೂ ಪರವಾಗಿಲ್ಲ ಎಲ್ಲೇ ಇದ್ದರೂ ಮೊಬೈಲ್ ಆನ್ ಇದ್ದಲ್ಲಿ ಏನಾದರೂ ಸಮಸ್ಯೆಗಳು ಕಂಡು ಬಂದಲ್ಲಿ ಪೊಲೀಸ್ ಅಧಿಕಾರಿಗಳು ಕೂಡಲೇ ಸಂಬಂಧಿಸಿದ ಮುಖಂಡರನ್ನು ಸಂಪರ್ಕಿಸಲು ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಪಿಎಸ್ಐ ಚಂದ್ರಕಾಂತ ಮೆಕಾಲೆ, ಪೊಲೀಸ್ ಸಿಬ್ಬಂದಿ ವರ್ಗ ಸೇರಿದಂತೆ ನಗರಸಭೆ ಸದಸ್ಯ ಸಿದ್ದು ಆರಬೋಳ, ಗುಂಡಪ್ಪ ತುಂಬಗಿ, ಸಯ್ಯದ್ ಖಾದ್ರಿ, ಖಾಲಿದ್‍ಸಾಬ, ಪಾಶಪಾಟೇಲ್ ಇತರರಿದ್ದರು.