ಪ್ರಮುಖ ಸುದ್ದಿ

ಜೆಜೆಎಂ 1.50 ಕೋಟಿ ವೆಚ್ಚದ ಕಾಮಗಾರಿಗೆ ದರ್ಶನಾಪುರ ಶಂಕುಸ್ಥಾಪನೆ

ಹತ್ತಿಗೂಡೂರ ಗ್ರಾಮದ 532 ಮನೆಗಳಿಗೆ ನೀರು ಪೂರೈಕೆ

ಜೆಜೆಎಂ 1.50 ಕೋಟಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ

ಜಲ ಜೀವನ ಯೋಜನೆಯಡಿ ಗ್ರಾಮದ 532 ಮನೆಗಳಿಗೆ ನೀರು ಪೂರೈಕೆ – ದರ್ಶನಾಪುರ

yadgiri, ಶಹಾಪುರಃ ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ನೀರಿನ ಸಮಸ್ಯೆಯೂ ಹೆಚ್ಚಾಗುತ್ತಿದ್ದು, ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಜಲ ಜೀವನ ಮಷಿನ್ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಒಂದುವರೆ ಕೋಟಿ ವೆಚ್ಚದ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದ್ದು, ಇದರಿಂದ ಗ್ರಾಮದ 532 ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ತಾಲೂಕಿನ ಹತ್ತಿಗೂಡೂರ ಗ್ರಾಮದಲ್ಲಿ ಒಂದುವರೆ ಕೋಟಿ ವೆಚ್ಚದ ಜಲ ಜೀವನ ಮಷಿನ್ ಯೋಜನೆಯಡಿ ಗ್ರಾಮದ ಎಲ್ಲಾ ಮನೆಗಳಿಗೆ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಜಲ ಜೀವನ ಮಷಿನ್ ಯೋಜನೆ ಪ್ರತಿಯೊಬ್ಬರ ಮನೆಗೂ ಕುಡಿಯುವ ನೀರು ಪೂರೈಸುವ ವ್ಯವಸ್ಥೆಯಾಗಿದೆ. ಮನೆ ಮನೆಗೆ ಪೈಪ್ ಲೈನ್ ಮೂಲಕ ಸಮರ್ಪಕ ನೀರೊದಗಿಸುವ ಕೆಲಸವಾಗಿದೆ. ಹೀಗಾಗಿ ಈ ಕಾಮಗಾರಿ ಅಚ್ಟುಕಟ್ಟಾಗಿ ನಿರ್ಮಿಸಿದಲ್ಲಿ ಗ್ರಾಮದ ಯಾರೊಬ್ಬರ ಮನೆಗೂ ನೀರಿನ ಅಭಾವ ಇರುವದಿಲ್ಲ ಎಂದರು. ಗುತ್ತಿಗೆದಾರರು ಕಾಮಗಾರಿಯನ್ನು ಆದಷ್ಟು ಬೇಗ ಮತ್ತು ಗುಣಮಟ್ಟವಾಗಿ ಮುಗಿಸಿಕೊಡಬೇಕೆಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಟಣಿಕೆದಾರವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಸುಧಾ ಶರಣಗೌಡ ಕೊಂಗಂಡಿ, ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮರಿಗೌಡ ಹುಲಕಲ್, ಕಾಂಗ್ರೆಸ್ ಮುಖಂಡರಾದ ಶಿವಮಹಾಂತಪ್ಪ ಚಂದಾಪುರ, ಜಿಪಂ ಮಾಜಿ ಸದಸ್ಯ ಸಿದ್ಧಲಿಂಗರಡ್ಡಿ ಸಾಹು, ತಾಪಂ ಮಾಜಿ ಅಧ್ಯಕ್ಷ ಬಸವಂತರಡ್ಡಿ, ಮುಖಂಡರಾದ ಮಲ್ಲಯ್ಯ ಹೊಸಮನಿ, ಎಇಇ ರಾಹುಲ್ ಕಾಂಬಳೆ, ಜೆಇ ಚನ್ನವೀರಯ್ಯ ಅಭಿವೃದ್ಧಿ, ಅಧಿಕಾರಿ ಅಕ್ಕನಾಗಮ್ಮ. ಗ್ರಾಮದ ಯುವ ಮುಖಂಡರಾದ ಗುರಪ್ಪ ಸುರಪುರ, ಶರಣಪ್ಪ ಟಣಕೆದಾರ. ಭೀಮರಾಯ ಹೊಸಮನಿ, ಅಯ್ಯಣ್ಣ ಮಹಾಮನಿ, ಶೇಖಪ್ಪ ಹೊಸಮನಿ, ಸಿದ್ದಣ್ಣಟಣಿಕೆದಾರ, ದೇವಿಂದ್ರ ನಾಟೇಕಾರ, ಶರಣರಡ್ಡಿ ಹತ್ತಿಗೂಡೂರ, ರಾಮಪ್ಪ ಮಡಿವಾಳ್ಕರ್, ಹಣಮಂತ್ರಾಯ ಸೇರಿದಂತೆ ಇತರರಿದ್ದರು.

ಕೃಷಿ ಮಂತ್ರಿಯಿಂದ ಮಲತಾಯಿ ಧೋರಣೆ – ದರ್ಶನಾಪುರ ಆಕ್ರೋಶ

ಶಹಾಪುರಃ ರಾಜ್ಯದಲ್ಲಿ ಕಳೆದ ಮೂರು ತಿಂಗಳಿಂದ ಮಳೆ ಪ್ರಮಾಣ ಜಾಸ್ತಿಯಾಗುತ್ತಿದ್ದು, ನಿರಂತರ ಮಳೆಯಿಂದ ಒಂದಿಲ್ಲೊಂದು ಕಷ್ಟಗಳನ್ನು ಜನರು ಎದುರಿಸುತ್ತಿದ್ದಾರೆ. ಯಾವ ಜಿಲ್ಲೆಯೂ ಇದಕ್ಕೆ ಹೊರತಾಗಿಲ್ಲ. ಕೆಲವಡೆ ಮಳೆ ಜೊತೆಗೆ ನೆರೆ ಹಾವಳಿಯಿಂದಲೂ ಸಾಕಷ್ಟು ನಷ್ಟ ಉಂಟಾಗಿದೆ. ಅಪಾರ ಪ್ರಮಾಣದಿ ಬೆಳೆ ಹಾನಿಯಾಗಿದೆ. ಮನೆಗಳು ಬಿದ್ದು ಹೋಗಿವೆ ಆದರೆ ರಾಜ್ಯ ಕೃಷಿ ಮಂತ್ರಿಗಳು ನಮ್ಮ ಜಿಲ್ಲೆಯತ್ತ ಮುಖ ಮಾಡದಿರುವದು ಮಲತಾಯಿಧೋರಣೆ ಅನುಸರಿಸುತ್ತಿದ್ದಾರೆ ಎಂದು ಶಾಸಕ ದರ್ಶನಾಪುರ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ಜಿಲ್ಲಾ ಉಸ್ತುವಾರಿಗಳಾಗಲಿ, ಯಾವುದೇ ಮಂತ್ರಿ ಮಹೋದಯರಾಗಲಿ ಇತ್ತ ಮುಖ ಮಾಡದಿರುವದು ಕಲ್ಯಾಣ ಕರ್ನಾಟಕ ಭಾಗವನ್ನು ನಿರ್ಲಕ್ಷಿಸುತ್ತಿದ್ದಾರೆ. ಉಸ್ತುವಾರಿ ಮಂತ್ರಿ ನಾಪತ್ತೆಯಾಗಿದ್ದಾರೆ. ರೈತರು ಸಂಕಷ್ಟದ ಸಮಯದಲ್ಲಿ ಪರಿಹಾರ ನೀಡುವದಿರಲಿ ಸಾಂತ್ವನ ಹೇಳುವ ಕರ್ತವ್ಯಪರತೆ ಸಹ ಸರ್ಕಾರ ಮರೆತಿದೆ ಎಂದು ಕಿಡಿಕಾರಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸ್ಮಾರ್ಟ್ ಕ್ಲಾಸ್ ನಡೆಸಲು 21 ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಮಾತ್ರ 63 ಕೋಟಿ ರೂ.ಗಳನ್ನು ನೀಡಿತ್ತು. ಆದರೆ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ ಅನುದಾನ ನೀಡದೆ ಇರುವ ಕುರಿತು ಮಾಜಿ ಮುಖ್ಯಮಂತ್ರಿ ಅವರು ಗುಡುಗಿದ ಹಿನ್ನೆಲೆ ಪುನಃ 19 ಶಾಸಕರಿಗೆ ತಲಾ 1 ಕೋಟಿ ಅನುದಾನ ನೀಡಿದ್ದಾರೆ. ರಾಜ್ಯ ಸರ್ಕಾರ ಹೀಗೆ ಮಲತಾಯಿ ಧೋರಣೆ ತೋರುತ್ತಿದೆ. ಶೈಕ್ಷಣಿಕ ವಿಷಯದಲ್ಲೂ ಸರ್ಕಾರ ರಾಜಕೀಯ ಬಣ್ಣ ಬಳಿಯುತ್ತಿದೆ ಎಂದು ದರ್ಶನಾಪುರ ಆಕ್ರೋಶ ವ್ಯಕ್ತಪಡಿಸಿದರು.

ಜಲ ಜೀವನ್ ಮಷಿನ್ ಯೋಜನೆಯಡಿ ಕುಡಿಯುವ ನೀರಿನ ಅಭಾವ ತಪ್ಪಲಿದೆ. ಅಲ್ಲದೆ ಗ್ರಾಮದಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ಗ್ರಾಮ ವಿಕಾಸ ಯೋಜನೆ ಅನುಷ್ಠಾನಗೊಳ್ಳಲಿದೆ. ಗ್ರಾಮದ ಪ್ರತಿ ಬಡಾವಣೆಯಲ್ಲಿ ಚರಂಡಿ, ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ ಇನ್ನೂ 30 ಲಕ್ಷ ರೂ.ಅನುದಾನ ಮಂಜೂರು ಮಾಡಿಸಲಾಗಿದೆ. ಬಾಭು ಜಗಜೀವನರಾಮ್ ಭವನ ನಿರ್ಮಾಣಕ್ಕೆ 10 ಲಕ್ಷ, ಮಸೀದಿ ಕಂಪೌಂಡ್ ಗೋಡೆ ಮತ್ತು ಅತನೂರ ಕ್ಯಾಂಪ್ ವರೆಗೆ ಪೈಪ್ ಲೈನ್ ಹಾಗೂ 5 ಶಾಲಾ ಕೋಣೆಗಳ ನಿರ್ಮಾಣ ಕಾಮಗಾರಿ ಪೂರ್ಣವಾಗಿವೆ. ಕೆಕೆಆರ್‍ಡಿಬಿಗೆ ಇನ್ನೂ 25 ಲಕ್ಷ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆ ಅನುದಾನ ಬಂದ ತಕ್ಷಣ ಅಗತ್ಯ ಇರುವ ಕಡೆ ಬಳಕೆ ಮಾಡಲಾಗುತ್ತದೆ.

-ಶರಣಬಸಪ್ಪ ದರ್ಶನಾಪುರ. ಶಾಸಕರು. ಶಹಾಪುರ.

Related Articles

Leave a Reply

Your email address will not be published. Required fields are marked *

Back to top button