ಮೊಮ್ಮಕ್ಕಳು ನೆನಪಾಗ್ತರೀ ಏನ್ಮಾಡೋದು ಎಂದ ವೃದ್ಧರು
ಅಳಲು ತೋಡಿಕೊಂಡ ವೃದ್ಧರು ನೆರೆದವರೆಲ್ಲರಲ್ಲಿ ಕಣ್ಣೀರು
yadgiri, ಶಹಾಪುರಃ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಗೂ ತಾಲೂಕು ಘಟಕ ಶಹಾಪುರ ಸಂಯುಕ್ತ ಆಶ್ರಯದಲ್ಲಿ ನಾಗರ ಪಂಚಮಿ ಪ್ರಯುಕ್ತ ನಗರದ ಆಶ್ರಯ ಕಾಲೊನಿ ಫಿಲ್ಟರ್ ಬೆಡ್ ನಲ್ಲಿರುವ ರಿಚ್ ರೂರಲ್ ಡೆವಲೆಪ್ಮೆಂಟ್ ಸರ್ವಿಸ್ ಮತ್ತು ಸೂಸೈಟಿ ಎಂಬ ಸಂಸ್ಥೆಯ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಆಹಾರ ಧಾನ್ಯ ವಿತರಿಸಲಾಯಿತು. ಈ ಸಂದರ್ಭದಲ್ಲಿ 20 ಕ್ಕೂ ಹೆಚ್ಚು ಜನ ವೃದ್ಧರು ಇದ್ದು, ತಮ್ಮ ಅಳಲನ್ನು ತೋಡಿಕೊಂಡರು ಎಂದು ವೇದಿಕೆಯ ಶಂಕರ ಹುಲಕಲ್ ತಿಳಿಸಿದರು.
ನಾವು ನಮ್ಮ ಮಕ್ಕಳನ್ನು ಪ್ರೀತಿಯಿಂದ ಸಾಕಿ ಬೆಳೆಸಿ ಜೋಪಾನ ಮಾಡಿವಿ ರೀ ಸಾಹೇಬ್ರ ಆದರೆ ನಮ್ಮ ಮಕ್ಕಳು ನಮ್ಮನ್ನು ನಡು ನೀರಾಗ ಕೈ ಬಿಟ್ಟಾರ್ರೀ ಆದರೆ ಆಶ್ರಮದವರು ನಮ್ಮನ್ನು ನಮ್ಮ ಮಕ್ಕಳಿಗಿಂತ ಜಾಸ್ತಿ ಪ್ರೀತಿ ತೋರಿಸುತ್ತಾರೆ ಎಂದು ಕಣ್ಣೀರಿಟ್ಟರು.
ಇಲ್ಲಿ ನಾವು ಎಲ್ಲರೂ ಒಂದೇ ಕುಟುಂಬದವರಂಗ ಇದ್ದೀವಿರೀ ಆದರೆ ಒಮ್ಮೊಮ್ಮೆ ಮೊಮ್ಮಕ್ಕಳು ಮುಖ ನೋಡಬೇಕಂತ ಬಾಳ ಆಸೆ ಆಗ್ತದ ರೀ ಆದರೆ ಏನ್ ಮಾಡೋದು ಸೊಸೆಯಂದಿರ ಚುಚ್ಚುಮಾತು ಕೇಳಕ್ಕಾಗದೇ ಇಲ್ಲಿ ಆಶ್ರಮದಲ್ಲಿ ಉಳಿದುಕೊಂಡಿವಿ.
ಇಲ್ಲಿ ಎಲ್ಲ ಸೌಕರ್ಯವೂ ಇದೆ ಆದರೆ ನಮ್ಮವರು ಅಂತ ಅಂದುಕೊಂಡವರೆಲ್ಲ. ಕಳ್ಳುಬಳ್ಳಿ ಅಂತ ದುಡಿದು ದುಡಿದು ಹೈರಾಣಾಗಿ ಮುಪ್ಪಿನ ಕಾಲಕ್ಕ ಇಲ್ಲಿ ಬಂದು ಜೀವನ ನಡೆಸುವಂಗ ಆಯ್ತಲ್ಲ ಅನ್ನೋ ಬೇಸರ ಬಿಟ್ರೆ ಮತ್ಯಾವುದೇ ಚಿಂತಿ ಇಲ್ಲ. ನಾವಿಲ್ಲಿ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದೇವಿ ಸರ್ ಎಂದು ಮತ್ತೊಬ್ಬರು ಸಂಕುಚಿತವಾಗಿ ನುಡಿದ. ಹಿರಿಯ ಜೀವಿಗಳ ಮಾತು ಕೇಳಿ ನೆರೆದೆಲ್ಲರ ಕಣ್ಣಲ್ಲೂ ನೀರು ಜಿನಿಗಿತು ಎಂದು ಹುಲಕಲ್ ವಿವರಿಸಿದರು. ಈ ಸಂದರ್ಭದಲ್ಲಿ ಸ್ನೇಹಿತರಾದ ಭೀಮನಗೌಡ ಪೊಲೀಸ್ ಪಾಟೀಲ್, ಹೊನ್ನಪ್ಪ ರಾಜಾಪುರ, ಮಾಳಪ್ಪ ಬೋಸಗಿ ಮತ್ತು ಆಶ್ರಮದ ನಿರ್ವಾಹಕ ಮನ್ವಂತ ಎಸ್.ಸಾಗರ ಇತರರಿದ್ದರು.