ರಾಜ್ಯದಲ್ಲಿ ಗಗನಕ್ಕೇರಿದ ತರಕಾರಿ-ಹಣ್ಣುಗಳ ಬೆಲೆ
ಬೆಂಗಳೂರು: ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ತರಕಾರಿ ಮತ್ತು ಹಣ್ಣುಗಳ ಬೆಲೆ ಗಗನಕ್ಕೇರಿದೆ. ಇದೇ ಪರಿಸ್ಥಿತಿ ಒಂದು ತಿಂಗಳ ಕಾಲ ಮುಂದುವರಿಯಬಹುದು ಎಂದು ತೋಟಗಾರಿಕಾ ಇಲಾಖೆ ಮತ್ತು ಹಾಪ್‌ಕಾಮ್ಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ.
ನಗರದ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಈಗ ಒಂದು ಕೆಜಿ ಉರುಳಿಕಾಯಿ 220 ರೂ.ಗೆ ಮಾರಾಟವಾಗುತ್ತಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 250 ರಿಂದ 290 ರೂ. ಆಗಿದೆ. ಅದೇ ರೀತಿ, ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಕೆಜಿಗೆ 280 ರಿಂದ 320 ರೂ. ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕಟ್ಟಿಗೆ 100 ರೂ.ಗೆ ಮಾರಾಟವಾಗುತ್ತಿದೆ. ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಮೆಂತ್ಯ ಸೊಪ್ಪು ಕೆಜಿಗೆ 220 ರೂ.ಗೆ ಮಾರಾಟವಾಗುತ್ತಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕಟ್ಟಿಗೆ 120-150 ರೂ.ಗೆ ಮಾರಾಟವಾಗುತ್ತಿದೆ. ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಶುಂಠಿ ಮತ್ತು ಬೆಳ್ಳುಳ್ಳಿ ಕ್ರಮವಾಗಿ ಕೆಜಿಗೆ 195 ಮತ್ತು 338 ರೂ.ಗೆ ಮಾರಾಟವಾಗುತ್ತಿದೆ.
ತರಕಾರಿ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದ್ದು, ತಮ್ಮ ಅಳಲು ತೋಡಿಕೊಂಡಿದ್ದಾರೆ. ‘ಟೊಮೇಟೊ, ಕ್ಯಾರೆಟ್, ನುಗ್ಗೇಕಾಯಿ ಮತ್ತು ಇತರ ತರಕಾರಿಗಳು ದುಬಾರಿಯಾಗಿದೆ. ಇದಲ್ಲದೆ, ಅವುಗಳ ಗುಣಮಟ್ಟ ಉತ್ತಮವಾಗಿಲ್ಲ’ ಎಂದು ಗೃಹಿಣಿ ರಿಧಿಮಾ ಕೆ ಹೇಳಿದರು.
ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಮಿರ್ಜಿ ಮಾತನಾಡಿ. ಹವಾಮಾನ ವೈಪರೀತ್ಯದಿಂದಾಗಿ ಬೆಲೆ ಹೆಚ್ಚಿದೆ. ಹಠಾತ್ ಮಳೆ ನಂತರ ಹೆಚ್ಚಿದ ತಾಪಮಾನದಿಂದಾಗಿ ಬೆಳೆಗಳಿಗೆ ಹಾನಿಯಾಗಿದೆ. ರಾಮನಗರ, ಕೋಲಾರ, ಚನ್ನಪಟ್ಟಣ, ದೇವನಹಳ್ಳಿ ಮತ್ತು ಹತ್ತಿರದ ಪ್ರದೇಶಗಳಿಂದ ಬೆಂಗಳೂರಿಗೆ ಹಣ್ಣು ಮತ್ತು ತರಕಾರಿಗಳು ಪೂರೈಕೆಯಾಗುತ್ತವೆ. ತೋಟಗಾರಿಕಾ ಬೆಳೆಗಳನ್ನು ಬೆಳೆಯಲು 30-45 ದಿನಗಳು ಬೇಕಾಗುತ್ತದೆ. ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಈಗ ತರಕಾರಿಗಳ ಬೆಲೆ ಹೆಚ್ಚಾಗಿದೆ ಎಂದು ಹೇಳಿದರು.
ಈಗ ಬೆಳೆಗಳು ಕೊಯ್ಲಿಗೆ ಸಿದ್ಧವಾಗಿಲ್ಲ. ಬೆಳೆಗಳನ್ನು ಬೆಳೆಯಲು ಒಂದು ತಿಂಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ. ಸದ್ಯ ಇತರ ರಾಜ್ಯಗಳಿಂದ ಪೂರೈಕೆಯೂ ಕಡಿಮೆಯಾಗಿದೆ. ಏಕೆಂದರೆ, ಅಲ್ಲಿ ಕೂಡ ಇದೇ ರೀತಿಯ ಹವಾಮಾನ ಪರಿಸ್ಥಿತಿಗಳು ಚಾಲ್ತಿಯಲ್ಲಿವೆ. ಜತೆಗೆ ರೈತರು ತೋಟಗಾರಿಕಾ ಬೆಳೆಗಳನ್ನು ಬಿಟ್ಟು ಬೇರೆ ಬೆಳೆಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಬೆಳೆ ಕಡಿಮೆಯಾಗಿದೆ. ಸದ್ಯ, ರಾಜ್ಯದಲ್ಲಿ ಒಟ್ಟು 27.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.