ಶಹಾಪುರ-ಕೋವಿಡ್ ನಿಗದಿತ ಆಸ್ಪತ್ರೆ ಸ್ಥಾಪನೆಗೆ ಸ್ಥಳ ಪರಿಶೀಲನೆ
ಕೋವಿಡ್ ನಿಗದಿತ ಆಸ್ಪತ್ರೆ ಸ್ಥಾಪನೆಗೆ ಸ್ಥಳ ಪರಿಶೀಲನೆ
ಶಹಾಪುರ: ದಿನೇ ದಿನೇ ನೊವೆಲ್ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಮುಂಜಾಗೃತವಾಗಿ ಕೋವಿಡ್ ನಿಗದಿತ ಆಸ್ಪತ್ರೆ ಸ್ಥಾಪಿಸುವ ಸಲುವಾಗಿ ಸೋಮವಾರ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ನಗರಕ್ಕೆ ಭೇಟಿ ನೀಡಿ ವಿವಿಧ ಸ್ಥಳಗಳನ್ನು ಪರಿಶೀಲಿಸಿ ಅಗತ್ಯ ಸೌಲಭ್ಯಗಳನ್ನು ಸಿದ್ಧಪಡಿಸುವಂತೆ ಸೂಚಿಸಿದ್ದಾರೆ ಎಂದು ತಹಶೀಲ್ದಾರ ಜಗನಾಥರಡ್ಡಿ ತಿಳಿಸಿದ್ದಾರೆ.
ನಗರದ ಬಾಪುಗೌಡ ಬಡಾವಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ನಿರ್ಮಿಸಿರುವ 20 ಕೋಣೆಗಳುಳ್ಳ ಪರಿಶಿಷ್ಟ ಜಾತಿ ವಸತಿನಿಲಯ ಸೇರಿದಂತೆ ತಾಲೂಕಿನ ಹೋತಪೇಟ ನವೋದಯ ಮಹಾ ವಿದ್ಯಾಲಯಕ್ಕೆ ಭೇಟಿ ನೀಡಿ ಮೂಲಸೌಲಭ್ಯ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸ್ಥಳದಲ್ಲಿ ಇದ್ದ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ಸೂಚಿಸಿದ್ದಾರೆ.
ಅಲ್ಲದೆ ಪರಿಶಿಷ್ಟ ಜಾತಿ ವಸತಿ ನಲಯದ ನೂತನ ಕಟ್ಟಡಗಳ ಪ್ರತಿ ಕೋಣೆಯಲ್ಲಿ ಎರಡು ಬೆಡ್ ಕಾಟ ವ್ಯವಸ್ಥೆ ಮಾಡಲು ತಿಳಿಸಿದ್ದಾರೆ. ನಂತರ ಕನ್ಯಾಕೋಳೂರ ರಸ್ತೆಯಲ್ಲಿರುವ ಬಿಸಿಎಂ ವಸತಿ ನಿಲಯಕ್ಕೆ ಭೇಟಿ ನೀಡಿ ಕ್ವಾರಂಟೈನ್ ಕೇಂದ್ರದಲ್ಲಿ ಸಮರ್ಪಕ ಸೌಲಭ್ಯ ಕಲ್ಪಿಸುವಂತೆ ವ್ಯವಸ್ಥೆ ಸರಿಪಡಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ತಹಶೀಲ್ದಾರ ಜಗನಾಥರಡ್ಡಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ, ಪೌರಾಯುಕ್ತ ಬಸವರಾಜ ಶಿವಪೂಜೆ ಇದ್ದರು.