ಪ್ರಮುಖ ಸುದ್ದಿ

ಹೊಲದಲ್ಲಿ ಹಾಕಿದ್ದ ಭತ್ತದ ರಾಶಿ ತುಂಬಲು ರೈತರ ಪರದಾಟ, ಲಾಕ್ ಡೌನ್ ತಂದ ಸಂಕಟ

ಸಂಚಾರಕ್ಕೆ ಕೃಷಿ ಕಾರ್ಮಿಕರಿಗಿಲ್ಲ ಅವಕಾಶ ಲಾಕ್ ಡೌನ್ ತಂದ ಸಂಕಟ

ಹೊಲದಲ್ಲಿ ಹಾಕಿದ್ದ ಭತ್ತದ ರಾಶಿ – ಮಳೆ ಬಂದರೆ ಸರ್ವ ನಾಶ

-ಮಲ್ಲಿಕಾರ್ಜುನ ಮುದ್ನೂರ

yadgiri, ಶಹಾಪುರಃ‌ ಕೊರೊನಾ ಕರ್ಫ್ಯೂ ಜಾರಿ ಪರಿಣಾಮ ರೈತರು ಬೆಳೆದ ಭತ್ತದ‌ ರಾಶಿ‌ ಹೊಲದಲ್ಲಿಯೇ ಗುಡ್ಡೆ ಹಾಕಿಕೊಂಡು‌ ಕುಳಿತ ರೈತರು ಮಳೆ ಬಂದರೆ ಭತ್ತ ಹಾಳಾಗುವ ಆತಂಕ ಎದುರಿಸುವಂತಾಗಿದೆ, ಸ್ವಲ್ಪ ಬಿರುಗಾಳಿ‌ ಬೀಸಿದರು, ಮೋಡವಾದರೆ ಮುಗಿಲ ಕಡೆ ಮುಖ ಮಾಡುವಂತಾಗಿದೆ.

ತಾಲೂಕಿನಲ್ಲಿ ಭತ್ತದ ರಾಶಿಯನ್ನು ರೈತರು ಹೊಲದಲ್ಲಿ ಗುಡ್ಡೆ ಹಾಕಿಕೊಂಡು ಕುಳಿತಿದ್ದು, ಕೃಷಿ ಕಾರ್ಮಿಕರಿಗೆ ಜಮೀನಿಗೆ ಹೋಗಲು ಅವಕಾಶ ನೀಡದ ಕಾರಣ ಆಕಸ್ಮಿಕ ಮಳೆ ಬಂದರೆ ಭತ್ತದ ಬೆಳೆ ಸರ್ವನಾಶವಾಗಲಿದೆ. ಮಳೆ ನೀರಿಗೆ ರಾಶಿ ಹಾಳಾಗಲಿದೆ ಎಂದು ರೈತರು ಕೈಕೈ ಇಸುಕುವಂತಾಗಿದೆ.

ಕೃಷಿ ಚಟುವಟಿಕೆಗೆ ಲಾಕ್ ಡೌನ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಸರ್ಕಾರ ಹೇಳುತ್ತೆ, ಇತ್ತ ಪೊಲೀಸರು ಲಾಠಿ ಹಿಡಿದು ಸಿಕ್ಕ ಸಿಕ್ಕ ವಾಹನಗಳನ್ನು ಠಾಣೆಗೆ ಎಳೆದೊಯ್ದು ದಂಡಾಸ್ಸ್ತ್ರ ಉಪಯೋಗಿಸುತ್ತಿದ್ದಾರೆ. ಹೀಗಾಗಿ ಕೃಷಿ ಕಾರ್ಮಿಕರಿಗಾಗಿ ರೈತರು ಪರದಾಡುವಂತಾಗಿದೆ.

ಸದ್ಯ ಭತ್ತ ಸೇರಿದಂತೆ ಹವಲಾರು ಬೆಳೆಗಳ ರಾಶಿಗಟ್ಟಲೇ ಗುಡ್ಡೆ ಜಮೀನಿನಲ್ಲಿಯೇ ಇದೆ. ಅದನ್ನು ಚೀಲಗಳಲ್ಲಿ ತುಂಬಿ ಕೃಷಿ ಮಾರುಕಟ್ಟೆಗೆ ಹಚ್ಚಬೇಕಿದೆ. ಅಥವಾ ಗೋದಾಮಿನಲ್ಲಿ ಸಂಗ್ರಹಿಸಬೇಕಿದೆ.

ಆ ನಿಟ್ಟಿನಲ್ಲಿ ಚೀಲ ತುಂಬಲು ಕಾರ್ಮಿಕರ ಅಗತ್ಯವಿದೆ. ಗೂಡ್ಸ್ ಆಟೋ ಅಥವಾ ವ್ಯಾನ್ ಅಥವಾ ಆಟೋದಲ್ಲಿ ಕೃಷಿ ಕಾರ್ಮಿಕರನ್ನು ಕರೆ ತರಲು ಪೊಲೀಸರು ಬಿಡುತ್ತಿಲ್ಲ. ಮಾರ್ಗ ಮಧ್ಯದಲ್ಲಿ ವಾಹನಗಳನ್ನು ತಡೆದು ಕ್ರಮಕ್ಕೆ ಮುಂದಾಗುತ್ತಿದ್ದಾರೆ ಎಂದು ಗೋಳಿಡುತ್ತಿದ್ದಾರೆ.

ಹೀಗಾಗಿ ರಾಶಿ ಹೊಲದಲ್ಲಿಯೇ ತಾಡಪಲ್ ಮುಚ್ಚಿ ಇಡಲಾಗಿದೆ. ಆದರೆ ಮಳೆ ಏನಾದರೂ ಜೋರಾಗಿ ಬಂದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಲಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಪೊಲೀಸರು ಯಾವುದೇ ಕಾರ್ಮಿಕರನ್ನು ಹೊತ್ತು ತರುವ ಆಟೋ ಇತರೆ ವಾಹನಗಳಿಗೆ ಅವಕಾಶ ಕಲ್ಪಿಸದ ಕಾರಣ ರೈತರು ಬೆಳೆದ ಫಲ ಹೊಲದಲ್ಲಿಯೇ ಕೊಳೆಯುತ್ತಿದೆ ಎನ್ನಲಾಗಿದೆ.

ಪೊಲೀಸರು ಕೃಷಿ ಕಾರ್ಮಿಕರು ಹೊಲದಿಂದ ಹೊಲ್ಲಕೆ ಊರಿಂದ ಊರಿಗೆ ತೆರಳಲು ಅವಕಾಶ ಕಲ್ಪಿಸಬೇಕು. ಹಲವಾರು ರೈತರ ಹೊಲದಲ್ಲಿ ಭತ್ತ ಸೇರಿದಂತೆ ಇತರೆ ಬೆಳೆಗಳ ರಾಶಿ ಇದೆ. ಅವುಗಳನ್ನು ಚೀಲದಲ್ಲಿ ತುಂಬಿ ಕೃಷಿ ಮಾರುಕಟ್ಟೆಗೆ ಹಚ್ಚಬೇಕಿದೆ. ಅದಕ್ಕೆ ಕಾರ್ಮಿಕರ ಅಗತ್ಯವಿದೆ. ಕಾರ್ಮಿಕರ ಅವಕಾಶ ಕಲ್ಪಿಸಲು ಅಧಿಕಾರಿಗಳನ್ನು ಕೇಳಿದರೆ ಕ್ಯಾರೆ ಎನ್ನುತ್ತಿಲ್ಲ. ಕಾರ್ಮಿಕರನ್ನು ಕರೆ ತಂದರೆ ಪೊಲೀಸರು ಕಿರಿಕಿರಿ ಮಾಡಿ ದಂಡ ಹಾಕಿ ವಾಹನ ವಶಕ್ಕೆ ಪಡೆಯುತ್ತಿದ್ದಾರೆ. ಗುಡುಗು, ಮಿಂಚು ಮಿಶ್ರಿತ ಗಾಳಿ ಮಳೆ ಲಕ್ಷಣಗಳು ಕಾಣುತ್ತಿದ್ದು, ಕಾರ್ಮಿಕರು ದೊರೆಯದಿದ್ದಲ್ಲಿ ಹೊಲದಲ್ಲಿ ಗುಡ್ಡೆ ಹಾಕಿದ್ದ ಭತ್ತ ಹಾಳಾಗಲಿದೆ. ಇದಕ್ಕೆ ಸರ್ಕಾರವೇ ಹೊಣೆಯಾಗಲಿದೆ.


-ರಾಯಪ್ಪ ಸಾಲಿಮನಿ. ರೈತ.

ರೈತರು ಬೆಳೆದ ಭತ್ತದ ರಾಶಿ ಹೊಲದಲ್ಲಿ ಹಾಕಿರುವದರಿಂದ ಅದನ್ನು ಚೀಲದಲ್ಲಿ ತುಂಬಿ ಮಾರುಕಟ್ಟೆಗೆ ಒಯ್ಯಲು ಅನುವು ಮಾಡಿಕೊಡಬೇಕು. ಕೃಷಿ ಕಾರ್ಮಿಕರನ್ನು ಹೊಲಗಳಿಗೆ ತೆರಳಲು ಅನುಮತಿ ನೀಡಬೇಕು. ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿರುವದಿಲ್ಲ ಎಂದು ಅಧಿಕಾರಿಗಳು ಹಾರಿಕೆ ಉತ್ತರ ಕೊಡುವದು ಸರಿಯಲ್ಲ. ಸ್ಥಳೀಯವಾಗಿ ಕೆಲವೊಂದು ಸಮಸ್ಯೆಗಳನ್ನು ಅಧಿಕಾರಿಗಳೇ ಪರಿಹರಿಸಬೇಕಾಗುತ್ತದೆ. ಕೂಡಲೇ ಈ ಕುರಿತು ತಾಲೂಕು ಆಡಳಿತ ಜವಬ್ದಾರಿ ತೆಗೆದುಕೊಂಡು ಕೃಷಿ ಕಾರ್ಮಿಕರಿಗೆ ಜಮೀನುಗಳಿಗೆ ತೆರಳುವ ಅವಕಾಶ ಕಲ್ಪಿಸಬೇಕು.


-ಗುರು ಕಾಮಾ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ.

Related Articles

Leave a Reply

Your email address will not be published. Required fields are marked *

Back to top button