ಬಿ.ಎಸ್.ಯಡಿಯೂರಪ್ಪ ಮನೆಗೆ ನಾಗಾಸಾಧುಗಳು ಬಂದಿದ್ದೇಕೆ?
ಬೆಂಗಳೂರು: ಇದು ಚುನಾವಣಾ ವರ್ಷವಾದುದರಿಂದ ರಾಜಕೀಯ ನಾಯಕರು ಅಧಿಕಾರ ಹಿಡಿಯುವುದಕ್ಕಾಗಿ ಅನೇಕ ಸರ್ಕಸ್ ಮಾಡುತ್ತಿದ್ದಾರೆ. ಮಾಜಿ ಸಿಎಂ , ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ದಸರಾ ಹಬ್ಬದ ಸಂದರ್ಭದಲ್ಲಿ ನಗರದ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಏಳು ಜನ ನಾಗಾ ಸಾಧುಗಳನ್ನು ಕರೆಸಿಕೊಂಡಿದ್ದರಂತೆ. ಅರ್ಧಗಂಟೆಗೂ ಹೆಚ್ಚುಕಾಲ ಬಿಎಸ್ ವೈ ನಾಗಾಸಾಧುಗಳ ಜೊತೆಗೆ ಸಮಾಲೋಚನೆ ನಡೆಸಿದರು. ನಾಗಾ ಸಾಧುಗಳಿಂದ ಶುಭ ಆಶೀರ್ವಾದವನ್ನು ಪಡೆದಿದ್ದಾರೆ ಎನ್ನಲಾಗಿದೆ. ಸಾಧುಗಳ ಆಶೀರ್ವಾದದ ಬಳಿಕ ಬಿಎಸ್ ವೈ ತಂಜಾವೂರಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಒಂದು ಕಡೆ ಕಮಲ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ. ಮತ್ತೊಂದು ಕಡೆ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಕೇಳಿಬರುತ್ತಿರುವ ಕೂಗು ತಮ್ಮ ರಾಜಕೀಯ ಭವಿಷ್ಯದ ಹಿನ್ನೆಡೆಗೆ ಕಾರಣವಾಗುತ್ತಿದೆಯೇ ಎಂಬ ಚಿಂತೆ ಯಡಿಯೂರಪ್ಪ ಅವರನ್ನು ಕಾಡುತ್ತಿದೆ. ಪರಿಣಾಮ ಮುಂಬರುವ ಚುನಾವಣೆಯ ಫಲಿತಾಂಶ ಹಾಗೂ ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲದಿಂದ ಬಿಎಸ್ ವೈ ನಾಗಾಸಾಧುಗಳನ್ನು ಕರೆಸಿದ್ದರನ್ನಲಾಗಿದೆ.
ನಾಗಾಸಾಧುಗಳು ಮಹಾತಪಸ್ವಿಗಳಾಗಿರುತ್ತಾರೆ. ಕಠೋರ ವೃತಗಳಿಂದ ತಮ್ಮದೇ ಆದ ಶಕ್ತಿ ಪಡೆದಿರುತ್ತಾರೆ. ಅವರು ನುಡಿದಂತೆಯೇ ಆಗುತ್ತದೆಂಬ ನಂಬಿಕೆಯಿದೆ. ಹೀಗಾಗಿ, ನಾಗಾಸಾಧುಗಳ ಆಶೀರ್ವಾದ ಪಡೆಯಲೆಂದು ಸೆಪ್ಟಂಬರ್ 29 ರಂದು ಬಿಎಸ್ ವೈ ತಮ್ಮ ಮನೆಗೆ ಕರೆಸಿಕೊಂಡಿದ್ದರು ಎಂದು ತಿಳಿದುಬಂದಿದೆ.