ಪ್ರಮುಖ ಸುದ್ದಿ

ಲೋಕಸಭೆ ಚುನಾವಣೆ: ರಾಜ್ಯದ 22 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವಿನ ವಿಶ್ವಾಸ

ಬೆಂಗಳೂರು: ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆಯ ಮತದಾನ ಮುಕ್ತಾಯಗೊಂಡ ಬೆನ್ನಲ್ಲೇ ಚುನಾವಣೆ ನಿರ್ವಹಣೆ ಕುರಿತು ರಾಜ್ಯ ಬಿಜೆಪಿ ನಾಯಕರು ಪರಾಮರ್ಶೆ ನಡೆಸಿದ್ದು, ಟಾರ್ಗೆಟ್‌ ರೀಚ್ ಕುರಿತ ಅವಲೋಕನ ನಡೆಸಿ ಪಕ್ಷದ ಹೈಕಮಾಂಡ್‌ಗೆ ವರದಿ ಸಲ್ಲಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಭಾನುವಾರ (ಮೇ 12ರಂದು) ನಡೆದ ಅವಲೋಕನ ಸಭೆಯಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದ ಗೌಡ, ಜಗದೀಶ್ ಶೆಟ್ಟರ್, ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ.ಸುನೀಲ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು. ಈ ಸಭೆಯಲ್ಲಿ ರಾಜ್ಯದ 22 ಸ್ಥಾನಗಳಲ್ಲಿ ಎನ್‌ಡಿಎಗೆ ಗೆಲುವು ನಿಶ್ಚಿತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಭೆಗೆ ಆಗಮಿಸಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ರಾಜವಂಶಸ್ಥ ಯದುವೀರ್ ಅಭ್ಯರ್ಥಿಗಳು ಹಾಗೂ ಪ್ರಮುಖರ ಮಧ್ಯೆಯೇ ಕುಳಿತಿದ್ದರು. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ, ಬಸವರಾಜ್‌ ಬೊಮ್ಮಾಯಿ ಸಹಿತ ಕೆಲವು ಪ್ರಮುಖ ಅಭ್ಯರ್ಥಿಗಳು ಸಭೆಗೆ ಗೈರಾಗಿದ್ದರು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬಿಜೆಪಿಯ ಸಂಖ್ಯಾಬಲ ಕಡಿಮೆಯಾಗುವ ಸಾಧ್ಯತೆ ಬಗ್ಗೆ ಪರೋಕ್ಷ ಅಭಿಪ್ರಾಯ ವ್ಯಕ್ತವಾಗಿದೆಯಾದರೂ, ಯಾವುದೇ ಕ್ಷೇತ್ರದ ಅಭ್ಯರ್ಥಿಯಾಗಲಿ, ಚುನಾವಣೆ ಉಸ್ತುವಾರಿಯಾಗಲಿ ಸೋಲಿನ ಭೀತಿಯನ್ನು ವ್ಯಕ್ತಪಡಿಸಿಲ್ಲ ಎಂದು ತಿಳಿದು ಬಂದಿದೆ. ಸರಾಸರಿ ಮತದಾನದ ಆಧಾರದ ಮೇಲೆ ಬಿಜೆಪಿ ಹಾಗೂ ಜೆಡಿಎಸ್ ಗೆಲ್ಲುವ ಕ್ಷೇತ್ರಗಳ ಮತಗಳ ಅಂತರದ ಮೇಲೆ ಮೂರು ರೀತಿಯ ವರ್ಗೀಕರಣ ಮಾಡಲಾಗಿದೆ. ಪ್ರಹ್ಲಾದ್ ಜೋಶಿ, ಬಿ.ವೈ.ರಾಘವೇಂದ್ರ, ತೇಜಸ್ವಿ ಸೂರ್ಯ, ರಾಜವಂಶಸ್ಥ ಯದುವೀರ್‌ ಮೊದಲಾದವರು ಭಾರೀ ಅಂತರದಿಂದ ಗೆಲ್ಲುವ ಅಂದಾಜು ಮಾಡಲಾಗಿದೆ. ಆದರೆ ಕರಾವಳಿಯ 3 ಕ್ಷೇತ್ರಗಳು ಸಹಿತ ಮಹತ್ವದ ಸಂಘಟನಾತ್ಮಕ ಕ್ಷೇತ್ರಗಳಲ್ಲಿ ಮತಗಳ ಅಂತರ ಕಡಿಮೆಯಾಗಬಹುದೆಂದು ನಿರೀಕ್ಷಿಸಲಾಗಿದೆ. ಜತೆಗೆ ಕಡಿಮೆ ಅಂತರದಿಂದ ಗೆಲ್ಲುವ ಕ್ಷೇತ್ರಗಳ ಪಟ್ಟಿಯನ್ನು ಮಾಡಲಾಗಿದೆ. ರಾಜ್ಯದಲ್ಲಿ ನಡೆದ ಎರಡು ಹಂತಗಳ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್​ನಿಂದಾಗಿ ಸ್ವಲ್ಪ ಮಟ್ಟಿಗೆ ಹಿನ್ನೆಡೆಯಾಗಬಹುದು ಎಂದು ಬಿಜೆಪಿ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಪ್ರಕರಣದಿಂದ ಪಕ್ಷದ ವರ್ಚಸ್ಸಿಗೆ ಸ್ವಲ್ಪ ಮಟ್ಟಿಗೆ ಹಿನ್ನೆಡೆಯಾಗಿರುವುದಾಗಿ ಅಸಮಾಧಾನ ಕೂಡಾ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜ ನೆಗಳ ಮಧ್ಯೆಯೂ ರಾಜ್ಯದ ಜನರು ನರೇಂದ್ರ ಮೋದಿಯವರ ಪರವಾಗಿ ಮತ ಚಲಾಯಿಸಲು ಬದ್ಧ ರಾಗಿರುವುದು ಸಭೆಯಲ್ಲಿ ಪ್ರಸ್ತಾವ ವಾಗಿದ್ದು, ಕೊನೆ ಗಳಿಗೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಹೊಂದಾಣಿಕೆ ಸಮಸ್ಯೆ ಸೃಷ್ಟಿ ಯಾದ ಬಗ್ಗೆ ಆಕ್ಷೇಪ ಕೇಳಿ ಬಂದಿದೆ. ಜತೆಗೆ ಕೆಲವು ಕ್ಷೇತ್ರಗಳಲ್ಲಿ ಹಣಕಾಸು ವಿಚಾರವಾಗಿ ಅಭ್ಯರ್ಥಿಗಳು ಸಮಸ್ಯೆ ಎದುರಿಸಬೇಕಾಯಿತು ಎಂಬ ಬೇಸರವೂ ವ್ಯಕ್ತವಾಗಿದೆ. ಜತೆಗೆ ಪರಿಷತ್‌ ಚುನಾವಣೆ ಸಿದ್ಧತೆ ಬಗ್ಗೆಯೂ ಚರ್ಚೆಯಾಗಿದೆ. ಪ್ರತಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ತಲಾ ನಾಲ್ವರು ಪ್ರಭಾರಿಗಳ ನೇಮಕದ ಜತೆಗೆ 25 ಮತದಾರರಿಗೆ ಒಬ್ಬ ಪ್ರಮುಖರ ನೇಮಕಕ್ಕೆ ಸೂಚನೆ ನೀಡಲಾಗಿದೆ. ಅಭ್ಯರ್ಥಿ ಅಂತಿಮಗೊಳಿಸುವುದು ತಡವಾದರೂ ಒಂದು ವರ್ಷದ ಹಿಂದಿನಿಂದಲೇ ತಯಾರಿ ನಡೆದಿರುವುದರಿಂದ ಸಮಸ್ಯೆಯಾಗು ವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಲೋಕಸಭಾ ಚುನಾವಣೆ ಘೋಷಣೆಯಾದ ದಿನದಿಂದ ರಾಜ್ಯ ಕಾಂಗ್ರೆಸ್‌ ಸರಕಾರ ಆಡಳಿತ ಯಂತ್ರವನ್ನು ವ್ಯಾಪಕವಾಗಿ ದುರುಪಯೋಗಪಡಿಸಿಕೊಂಡಿದ್ದು, ಸರಕಾರದ ವಿರುದ್ಧ 152 ದೂರುಗಳನ್ನು ಚುನಾವಣ ಆಯೋಗಕ್ಕೆ ನೀಡಲಾಗಿದೆ ಎಂದು ಬಿಜೆಪಿ ಚುನಾವಣೆ ನಿರ್ವಹಣ ಸಮಿತಿ ರಾಜ್ಯ ಸಂಚಾಲಕ ವಿ.ಸುನೀಲ್‌ ಕುಮಾರ್‌ ತಿಳಿಸಿದರು. ಲೋಕಸಭಾ ಚುನಾವಣೆ ಅವಲೋಕನ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರಕಾರ ಎಲ್ಲ ಜಿಲ್ಲಾ ತಾಲೂಕುಗಳಲ್ಲಿ ನಮ್ಮ ಕಾರ್ಯಕರ್ತರನ್ನು ಬೆದರಿಸುವ ತಂತ್ರ ನಡೆಸಿದೆ. ಕಾರ್ಯಕರ್ತರ ವಿರುದ್ಧ ಅಪಾರ ಮೊಕದ್ದಮೆ ದಾಖಲಿಸಲಾಗಿದೆ. ಇವುಗಳ ವಿರುದ್ಧ ಸ್ಥಳೀಯವಾಗಿ ದೂರು ಕೊಡಲಾಗಿದೆ. ರಾಜಕೀಯವಾಗಿಯೂ ನಾವು ಈ ಆಕ್ರಮಣವನ್ನು ಎದುರಿಸುತ್ತೇವೆ ಎಂದು ಹೇಳಿದರು. ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಹಿತ 14 ಜನ ರಾಷ್ಟ್ರೀಯ ಪ್ರಮುಖರು 79 ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದರು. 39 ಕಡೆಗಳಲ್ಲಿ ರೋಡ್‌ ಶೋ ನಡೆದಿವೆ. ರಾಜ್ಯ ನಾಯಕರಾದ ಯಡಿಯೂರಪ್ಪ, ವಿಜಯೇಂದ್ರ ಮತ್ತು ಆರ್‌.ಅಶೋಕ್‌ ಸಹಿತ ಸುಮಾರು 30 ಪ್ರಮುಖರು 557 ಸಭೆಗಳಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. 139 ಕಡೆಗಳಲ್ಲಿ ರಾಜ್ಯ ನಾಯಕರು ರೋಡ್‌ ಶೋ ನಡೆಸಿದ್ದಾರೆ ಎಂದು ವಿವರಿಸಿದರು. ಒಟ್ಟು 650ಕ್ಕೂ ಹೆಚ್ಚು ಸಾರ್ವಜನಿಕ ಸಭೆ, 180ಕ್ಕೂ ಹೆಚ್ಚು ರೋಡ್‌ ಶೋಗಳನ್ನು ಮಾಡಲಾಗಿದೆ. ಕಾಂಗ್ರೆಸ್‌ ಅಪಪ್ರಚಾರ ಬಗ್ಗೆ ಹಾಗೂ ಕಾಂಗ್ರೆಸ್‌ ಅಪಾಯಕಾರಿ ಎಂದು ತಿಳಿಸಲು ಮನೆಯಂಗಳದಲ್ಲಿ ಸಭೆ ನಡೆಸಿದ್ದೇವೆ. 50-75 ಜನರನ್ನು ಒಳಗೊಂಡ ಸುಮಾರು 60 ಸಾವಿರಕ್ಕೂ ಹೆಚ್ಚು ಸಣ್ಣಸಣ್ಣ ಸಭೆಗಳನ್ನು ಬೂತ್‌ ಮಟ್ಟದಲ್ಲಿ ನಡೆಸಿರುವುದು ಈ ಚುನಾವಣೆಯ ವಿಶೇಷ ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button