ಶಹಾಪುರಃವಿಭೂತಿಹಳ್ಳಿಯಲ್ಲಿರುವ ರಾಷ್ಟ್ರೀಯ ಸ್ಮಾರಕ ರಕ್ಷಿಸಿ
ಪೂರ್ವಜರು ನಿರ್ಮಿಸಿದ ಕಾಲಮಾನ ತಿಳಿಸುವ ತಾಣ
ಮಲ್ಲಿಕಾರ್ಜುನ ಮುದ್ನೂರ
ಶಹಾಪುರ: ಮಹತ್ವದ ರಾಷ್ಟ್ರೀಯ ಸ್ಮಾರಕವೊಂದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವಿಭೂತಿಹಳ್ಳಿಯಲ್ಲಿದೆ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ತಾಣ ಸಂರಕ್ಷಿತ ಪ್ರದೇಶ. ಇಲ್ಲಿ ಪೂರ್ವಜರು ಸಾಲುಕಲ್ಲುಗಳ ಮುಖಾಂತರ ಸೂರ್ಯಾಸ್ಥ ಹಾಗೂ ಸುರ್ಯೋದಯವನ್ನು ವೀಕ್ಷಿಸುವ ಮೂಲಕ ಮುಂಚಿತವಾಗಿ ಋತುಗಳು, ಕಾಲಮಾನವನ್ನು ಗುರುತಿಸಲ್ಪಡುತ್ತಿದ್ದರು ಎಂಬುವುದು ತಿಳಿದು ಬರುತ್ತದೆ.
ಈ ಪ್ರದೇಶದಲ್ಲಿ ಅಂದಾಜು 600 ಕ್ಕಿಂತಲೂ ಹೆಚ್ಚು ಕಲ್ಲುಗಳು ಇಲ್ಲಿವೆ. ಅವುಗಳನ್ನು ಸಾಲಾಗಿ ಜೋಡಿಸಲಾಗಿದ್ದು, ಪೂರ್ವದಿಂದ ಪಶ್ಚಿಮದಿಕ್ಕಿನಡೆಗೆ ಇರುವ ಕಲ್ಲುಗಳ ಸಾಲಿನ ಮೂಲೆಗಳಿಂದ ನೋಡಿದಾಗ ಆಯನ ಸಂಕ್ರಾಂತಿಯ ಸೂರ್ಯೋದಯ ಹಾಗೂ ಸೂರ್ಯಾಸ್ಥಮಯವನ್ನು ಪೂರ್ವಜರು ಗಮನಿಸುತ್ತಿದ್ದರು ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಸ್ತುತ ಸಾಲು ಕಲ್ಲುಗಳ ಮಧ್ಯೆ ಗಿಡಗಳನ್ನು ಬೆಳೆಸಿರುವ ಕಾರಣ ನಿರ್ಧಿಷ್ಟವಾಗಿ ಈ ತಾಣದ ಮಹತ್ವ ಅರಿಯಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಸಹ ಕೇಳಿ ಬರುತ್ತಿವೆ.
ಭವಿಷ್ಯವಾಣಿ ಅವಲಂಬಿತ: ಹಿಂದಿನ ಕಾಲದಲ್ಲಿ ಋತುಮಾನಗಳ ಪರಿಚಯ ಹೇಗೆ ಎಂಬುವುದು ಯಕ್ಷ ಪ್ರಶ್ನೆಯಾಗಿತ್ತು. ಅಲ್ಲದೆ ಪಂಚಾಂಗದ ಘಟನೆಗಳ ಜಾಡನ್ನು ಕಂಡುಕೊಳ್ಳುವುದು ಅವರಿಗೆ ಅಗತ್ಯವಿತ್ತು ಎಂದೆನಿಸುತ್ತದೆ. ಏಕೆಂದರೆ ಪೂರ್ವಜರು ಬಿತ್ತನೆ, ಕೋಯ್ಲು, ಬೇಟೆ ಹಾಗೂ ನಾನಾ ಚಟುವಟಿಕೆಗಳಿಗೆ ಭವಿಷ್ಯ ವಾಣಿ ಮೇಲೆ ಅವಲಂಬಿತರಾಗಿದ್ದರು.
ಆ ಕಾರಣಕ್ಕೆ ಋತುಗಳ ಬದಲಾವಣೆಯನ್ನು ಮುಂಚಿತವಾಗಿ ತಿಳಿದುಕೊಳ್ಳುವ ದೃಷ್ಠಿಕೋನದಿಂದ ಈ ತಾಣವನ್ನು ನಿರ್ಮಿಸಿಕೊಂಡಿದ್ದಾರೆ ಎಂಬುದು ಹಲವಾರು ಸಂಶೋಧಕರ ಅಭಿಪ್ರಾಯ.
ಈ ತಾಣ ಸಂರಕ್ಷಿತ ಭಾರತ ಸರಕಾರ ಪುರಾತತ್ತ್ವ ಇಲಾಖೆ ಅಧೀನಕ್ಕೊಳಪಟ್ಟಿದ್ದು, ಈ ಪ್ರದೇಶದಿಂದ ಅಂದಾಜು 300 ಮೀಟರ್ ಅಂತರದವರೆಗೆ ರಕ್ಷಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ.
ಆದರೆ ಅದು ನಾಮಫಲಕದಲ್ಲಿ ಮಾತ್ರ ಓದಬಹುದು. ಸುತ್ತಲೂ ಸೇರಿದಂತೆ ಈ ತಾಣದ ಹೆದ್ದಾರಿ ಬದಿ ಮುಂದುಗಡೆ ನಾನಾ ಜನರು ಮನೆ, ಜೋಪಡಿ ನಿರ್ಮಿಸಿಕೊಂಡಿದ್ದಾರೆ. ಅಲ್ಲದೆ ಇದೇ ತಾಣಕ್ಕೆ ಸಂಬಂಧಿಸಿದ ಜಮೀನು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಬಲವಾದ ಆರೋಪವು ಪ್ರಜ್ಞಾವಂತರಿಂದ ಕೇಳಿ ಬರುತ್ತಿದೆ.
ಜಾನುವಾರುಗಳ ತಾಣ: ಇಂತಹ ಮಹತ್ವದ ತಾಣದಲ್ಲಿ ಸದಾ ಕುರಿ, ಮೇಕೆ, ದನ ಕರುಗಳು ಬೀಡು ಬಿಟ್ಟಿರುತ್ತವೆ. ಮಹತ್ವದ ಇತಿಹಾಸ ಹೊಂದಿದ ರಾಷ್ಟ್ರೀಯ ಸ್ಮಾರಕಕಕ್ಕೆ ಸೂಕ್ತ ರಕ್ಷಣೆ ಇಲ್ಲದಿರುವುದು ವಿಪರ್ಯಾಸ.
ಅಲ್ಲದೆ ರಾಷ್ಟ್ರೀಯ ಸ್ಮಾರಕ ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗೆ ಮಾಹಿತಿಯ ಕೊರತೆಯೂ ಇದೆ. ಸ್ಮಾರಕ ರಕ್ಷಣೆಗೆ ಇರುವ ಗಾರ್ಡ್ ಆಟಕುಂಟು ಲೆಕ್ಕಕ್ಕಿಲ್ಲ.
ನಾನಾ ಗಿಡ ಮರಗಳು ಬೆಳೆದಿರುವುದರಿಂದ ಈ ತಾಣದ ಪೂರ್ಣ ಮಹತ್ವ ಅರಿಯಲು ಸಾಧ್ಯವಾಗುತ್ತಿಲ್ಲ. ಪ್ರವಾಸಿಗರಿಗೆ ಅರ್ಥವಾಗುತ್ತಿಲ್ಲ. ಇಲ್ಲಿ ಹಾಕಲಾದ ನಾಮ ಫಲಕ ಓದಿದಾಗ ಮಾತ್ರ ಸ್ಥಳದ ಮಹತ್ವ ಅರಿವಿಗೆ ಬರುತ್ತದೆ. ಆದರೆ ಅನುಭವಿಸಲು ಅವಕಾಶವಿಲ್ಲ ಎಂಬುವುದು ಪ್ರವಾಸಿಗರ ಅಳಲು.
ಜೂಜು ಅಡ್ಡೆ ಆರೋಪ: ಇಂತಹ ಮಹತ್ವದ ತಾಣ ಜೂಜುಕೋರರ ಅಡ್ಡೆಯಾಗಿ ಅನಾದರಕ್ಕೆ ಸಾಕ್ಷಿಯಾಗುತ್ತಿರುವುದು ದುರಂತ. ಇಲ್ಲಿ ನಾನಾ ಪಾರ್ಟಿಗಳು ನಡೆಸಲು ಅವಕಾಶ ನೀಡುತ್ತಿರುವುದರಿಂದ ಇದು ಪಡ್ಡೆ ಹುಡುಗರು ಕುಡಿದು ಮಜಾ ಮಾಡುವ ಅಡ್ಡೆಯಾಗಿ ಪರಿಣಮಿಸುತ್ತಿದೆ ಇದಕ್ಕೆಲ್ಲ ಕಡಿವಾಣ ಹಾಕಬೇಕಿದೆ.
ಅಲ್ಲದೆ ಈ ತಾಣದ ಪಶ್ಚಿಮ ದಿಕ್ಕಿನಡೆಗೆ ವೀಕ್ಷಿಸಬಹುದಾದ ಬೆಟ್ಟ, ಗುಡ್ಡಗಳ ಸಾಲಿನ ಹಂದರದಲ್ಲಿ ಸೂರ್ಯಾಸ್ಥಮಯವನ್ನು ಕಂಡುಕೊಳ್ಳುವಂತ ಬೆಟ್ಟದ ಸಾಲುಗಳು ನಾನಾ ಜನರ ಹೊಡೆತಕ್ಕೆ ಹಾಳಾಗುತ್ತಿದ್ದು, ಅದನ್ನು ನಿಯಂತ್ರಿಸುವ ಅಗತ್ಯವಿದೆ.
ಮತ್ತು ಈ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ನಾಮಫಲಕಗಳನ್ನು ಅಳವಡಿಸುವ ಅಗತ್ಯವಿದೆ.
ಹೇಳಿಕೆಃ
ಇಂತಹ ಮಹತ್ವದ ಕಲ್ಲು ಹಂದರಗಳು ದೇಶದ ಕರ್ನಾಟಕ ಹಾಗೂ ಆಂದ್ರ ಪ್ರದೇಶದಲ್ಲಿ ಮಾತ್ರ ಕಂಡು ಬರುತ್ತವೆ. ಇದೊಂದು ಅಭೂತಪೂರ್ವ ಕಲ್ಲಿನ ಜೋಡಣಾ ತಾಣವಾಗಿದ್ದು, ಇದರ ರಕ್ಷಣೆ, ಸರಿಯಾದ ಮಾಹಿತಿ, ಅಭಿವೃದ್ಧಿ ಜತೆಗೆ ಪ್ರಚಾರದ ಅಗತ್ಯವಿದೆ. ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕು.
–ಡಾ.ಧರ್ಮಣ್ಣ ಬಡಿಗೇರ. ಇತಿಹಾಸ ಪ್ರಾಧ್ಯಪಕರು, ಸಂಶೋಧನಾರ್ಥ ಬರಹಗಾರ.
ಇದೊಂದು ರಾಷ್ಟ್ರೀಯ ತಾಣವಾಗಿದ್ದು, ಇದರ ರಕ್ಷಣೆ ನಮ್ಮೆಲ್ಲರ ಹೊಣೆ. ಶೈಕ್ಷಣಿಕ ಅಧಿಕಾರಿಗಳು ಜಿಲ್ಲಾದ್ಯಂತ ಇರುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಶಿಕ್ಷಕ, ಉಪನ್ಯಾಸಕರ ಜತೆ ಈ ಸ್ಥಳ ವೀಕ್ಷಿಸುವ ಕಾರ್ಯಕ್ರಮ ರೂಪಿಸುವ ಅಗತ್ಯವಿದೆ. ಈ ಮೂಲಕ ತಾಣದ ಮಹತ್ವ, ಪೂರ್ವಜರ ದೂರ ದೃಷ್ಠಿಯನ್ನು ಅರ್ಥೈಸುವ ಕಾರ್ಯವಾಗಬೇಕಿದೆ.
–ಖಾಸಿಂಅಲಿ ಹುಜರತಿ, ಉಪನ್ಯಾಸಕರು.