ಈಶ್ವರಪ್ಪ ಸರ್ಕಾರದ ಭಾಗವಾಗಿ ಮುಂದುವರಿಕೆಗೆ ಒಪ್ಪಲಾಗದು – ಖರ್ಗೆ
ಸಚಿವ ಈಶ್ವರಪ್ಪನವರು ಸರ್ಕಾರದ ಭಾಗವಾಗಿ ಮುಂದುವರೆಯುವುದನ್ನ ಒಪ್ಪಲಾಗದು – ಖರ್ಗೆ ಸ್ಪಷ್ಟೋಕ್ತಿ.
ವಿವಿ ಡೆಸ್ಕ್ಃ ದೇಶದ ರಾಷ್ಟ್ರಧ್ವಜವನ್ನ ಬದಲಾಯಿಸುತ್ತೇವೆ, ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ರಾಷ್ಟ್ರಕ್ಕೆ ಅವಮಾನ ಮಾಡಿರುವ ಬಿಜೆಪಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಸರ್ಕಾರದ ಭಾಗವಾಗಿ ಮುಂದುವರೆಯುವುದನ್ನ ಯಾವುದೇ ಕಾರಣಕ್ಕೂ ಒಪ್ಪಲಾಗುವುದಿಲ್ಲ ಎಂದು ಮಾಜಿ ಸಚಿವ, ಶಾಸಕ ಹಾಗೂ ಕೆಪಿಸಿಸಿ ವಕ್ತಾರ, ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಭಾರತ ದೇಶದ ಅವಿಭಾಜ್ಯ ಅಂಗವಾಗಿರುವ ಕರ್ನಾಟಕ ರಾಜ್ಯದ ಮಂತ್ರಿಯಾಗಿ, ದೇಶದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಇವರ ರಾಜೀನಾಮೆ ಪಡೆಯುವವರೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷ ವಿಧಾನ ಸೌದದಲ್ಲೇ ಅಹೋರಾತ್ರಿ ಪ್ರತಿಭಟನೆ ನಡೆಸಲಿದೆ.
ಈಗಲೂ ಸಹ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಸಚಿವರನ್ನ ವಜಾ ಮಾಡದೇ, ಅವರ ಪರವಾಗಿಯೇ ಬಿಜೆಪಿ ಸಮರ್ಥಿಸಿಕೊಳ್ಳುತ್ತಿದೆ.
ಈ ಕುರಿತು ನಾವು ಚರ್ಚೆಗೆ ಆಗ್ರಹಿಸಿ ಸಲ್ಲಿಸಿದ್ದ ನಿಲುವಳಿ ಸೂಚನೆಯನ್ನೂ ಸಭಾಧ್ಯಕ್ಷರು ನಿರಾಕರಿಸಿ ವಿಧಾನಸಭಾ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ನಮ್ಮ ಅಹೋರಾತ್ರಿ ಹೋರಾಟ ಕೂಡ ವಿಧಾನಸಭೆಯಲ್ಲೇ ಮುಂದುವರೆಯಲಿದೆ ಎಂದು ಅವರು ಹೇಳಿದ್ದಾರೆ.