ಸಂಸ್ಥಾನದ ಸಾಂಸ್ಕೃತಿಕ ಸೇವೆ ಅನನ್ಯ – ದರ್ಶನಾಪುರ

24 ನೇ ವರ್ಷದ ಸಗರನಾಡು ಉತ್ಸವ
yadgiri, ಶಹಾಪುರಃ ದಾಸೋಹ, ಧಾರ್ಮಿಕ ಕಾರ್ಯಗಳ ಜೊತೆಗೆ ಸದಾ ಸಾಂಸ್ಕೃತಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಗರನಾಡಿನ ಹಲವಾರು ಪ್ರತಿಭೆಗಳಿಗೆ ನಾಡಿನ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುತ್ತಿರುವ ಸ್ಥಳೀಯ ಚರಬಸವೇಶ್ವರ ಸಂಸ್ಥಾನದ ಸೇವೆ ಅನನ್ಯ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದ ಚರಬಸವೇಶ್ವರ ಗದ್ದುಗೆ ಸಂಸ್ಥಾನದ ಆವರಣದಲ್ಲಿ ಶ್ರೀಚರಬಸವೇಶ್ವರ ಸಂಗೀತ ಸೇವಾ ಸಮಿತಿ ಆಯೋಜಿಸಿದ 24 ನೇ ಸಗರನಾಡು ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಡಿನ ಕಲಾವಿದರು ಮತ್ತು ಸಾಧಕರನ್ನು ಗೌರವಿಸುವ ಮೂಲಕ ಪ್ರೋತ್ಸಾಹಿಸುವದು ಅಲ್ಲದೆ, ಸೂಕ್ತ ವೇದಿಕೆ ಕಲ್ಪಿಸುವದು. ರಾಜ್ಯೋತ್ಸವ ಅಂಗವಾಗಿ ಕನ್ನಡ ಅಭಿಮಾನ ಬೆಳೆಸುವದು ಸೇರಿದಂತೆ ಸಗರನಾಡು ಅಭೀವೃದ್ಧಿಗಾಗಿ ವಿವಿಧ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸುವದು.
ಹೀಗೆ ಹಲವಾರು ಸಾಂಸ್ಕøತಿಕ ಸೇವೆ ಮೂಲಕ ಸಂಸ್ಥಾನ ಚಿರಪರಿಚತವಾಗಿ ನಾಡಿನ ಸೇವೆಯಲ್ಲಿ ತೊಡಗಿಸಿಕೊಂಡಿರುವದು ಶ್ಲಾಘನೀಯ ಎಂದರು.
ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಕಾನೂನು ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ಅಲ್ಲದೆ ಒಳಿತು ಮಾಡು ಮನುಸಾ ನೀನಿರುವದು ಮೂರು ದಿವಸ ಎಂಬ ಹಾಡು ಹೇಳುವ ಮೂಲಕ ಎಲ್ಲರನ್ನು ರಂಜಿಸಿದರು.
ನಟಿ ಅನುಷ ರೈ ಮಾತನಾಡಿ ಕಾರ್ಯಕ್ರಮ ಕುರಿತು ಸಂತಸ ವ್ಯಕ್ತಪಡಿಸಿದರು. ಅಲ್ಲದೆ ಕನ್ನಡ ಚಿತ್ರರಂಗಕ್ಕೆ ಉತ್ತರ ಕರ್ನಾಟಕ ಭಾಗದ ಜನರ ಆಶೀರ್ವಾದವಿದೆ. ಚಿತ್ರರಂಗ ಬೆಳೆಯುವಲ್ಲಿ ತಮ್ಮ ಪಾತ್ರವೂ ಇದೆ. ಪ್ರತಿಯೊಬ್ಬ ಹೊಸ ನಟ, ನಟಿಯರ ಸಿನಿಮಾ ನೋಡಿ ಪ್ರೋತ್ಸಾಹಿಸುವ ತಮ್ಮ ಸೇವೆಗೆ ಚಿರ ಋಣಿ ಎಂದರು. ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಹಾಡಿಗೆ ನೃತ್ಯಿಸುವ ಮೂಲಕ ವೀಕ್ಷರನ್ನು ರಂಜಿಸಿದರು.
ಇದೇ ಸಂದರ್ಭದಲ್ಲಿ ಸಗರನಾಡ ಸಿರಿ ಪ್ರಶಸ್ತಿ ನೀಡಿ ಹಲವರನ್ನು ಗೌರವಿಸಲಾಯಿತು. ಶಿವರಾಜ ದೇಶಮುಖ, ಮಹೇಶ ಆನೇಗುಂದಿ, ಡಿವೈಎಸ್ಪಿ ಪಿ.ದತ್ತಾತ್ರೇಯ ರಾಯಚೂರ, ಪಿಐ ಶ್ರೀನಿವಾಸ ಅಲ್ಲಾಪುರೆ ಉಪಸ್ಥಿತರಿದ್ದರು. ಮಿವಿಕ್ರಿ ಸುನೀಲ್ ಶಿರ್ಣಿ, ಕಲಾವಿದ ಆಂಜನೇಯ, ಗಾಯಕಿ ಕವಿತಾ ಇತರರು ಪ್ರದರ್ಶನ ನೀಡಿದರು. ಸಮಿತಿ ಅಧ್ಯಕ್ಷ ಶರಣು ಗದ್ದುಗೆ ಅಧ್ಯಕ್ಷತೆವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥಾನದ ಬಸವಯ್ಯ ಶರಣರು ಸಾನಿಧ್ಯವಹಿಸಿದ್ದರು.