Home

ಬಂಜಾರರ ಆರಾಧ್ಯ ದೈವ, ಬಾಲ ಬ್ರಹ್ಮಚಾರಿ, ಬಹುದೊಡ್ಡ ಸಾಧುಪುರುಷ: ಸಂತ ಶ್ರೀ ಸೇವಾಲಾಲ ಮಹಾರಾಜ – ಡಾ. ರಾಠೋಡ

ಬಂಜಾರರ ಆರಾಧ್ಯ ದೈವ, ಬಾಲ ಬ್ರಹ್ಮಚಾರಿ, ಬಹುದೊಡ್ಡ ಸಾಧುಪುರುಷ: ಸಂತ ಶ್ರೀ ಸೇವಾಲಾಲ ಮಹಾರಾಜ
– ಡಾ. ಸಿದ್ದಲಿಂಗ ರಾಠೋಡ

ಬಂಜಾರರ ಸಾಂಸ್ಕøತಿಕ ವೀರ ಸಂತ ಶ್ರೀ ಸೇವಾಲಾಲ. ರಾಥೋಡ ಮನೆತನದ ಬಂಜಾರ ಕುಲದ ಭೀಮಾನಾಯಕ ಮತ್ತು ಧರ್ಮಿಣಿಯರ ಮಗ ಸೇವಾಲಾಲ. ಈತ ನಿತ್ಯವೂ ದನಗಳನ್ನು ಕಾಯಲು ಕಾಡಿಗೆ ಹೊಗುತ್ತಿದ್ದ. ಒಮ್ಮೆ ಸೇವಾಲಾಲನ ಜೊತೆಗಿದ್ದ ಗೋಪಾಲಗೆ ಹಸಿವಾಗಿ ತಿನ್ನಲು ಅನ್ನವಿಲ್ಲದಿದ್ದಾಗ, ಕರಿಮಣ್ಣಿನಲ್ಲಿ ಹಳ್ಳದ ನೀರು ಹಾಕಿ ಶಿರಾ ತಯಾರಿಸಿದನಂತೆ. ಮತ್ತೊಂದು ದಿನ ಹಸುಗಳನ್ನು ಕಾಡಿನಲ್ಲಿ ಮೇಯಲು ಬಿಟ್ಟು ಕೊಳಲನೂದುತ್ತಾ ಕುಳಿತ್ತಿರುವಾಗ ಜಗದಾಂಬ ಎಂಬ ದೇವತೆ ಮುದುಕಿಯ ವೇಷದಲ್ಲಿ ಬಂದು ಸೇವಾಲಾಲನನ್ನು ತನ್ನ ಭಕ್ತನಾಗುವಂತೆ ಕೇಳುತ್ತಾಳೆ. ಇದಕ್ಕೆ ಸೇವಾಲಾಲ ಒಪ್ಪದೇ ಹೋದಾಗ, ಅವನಿದ್ದ ತಾಂಡಾಕ್ಕೆ ಮಾಹಾಮಾರಿ ರೋಗ ಬರುವಂತೆ ಮಾಡುತ್ತಾಳೆ. ಸೇವಾಲಾಲನಿಗೆ ದಟ್ಟದಾರಿದ್ರ್ಯ ಅಂಕುರಿಸುವಂತೆ ಮಾಡಿ, ಅವನಿಗೆ ಕಷ್ಟಗಳ ಮೇಲೆ ಕಷ್ಟಕೊಟ್ಟು, ಕಡೆಗೂ ಆತನನ್ನು ತನ್ನ ಭಕ್ತನನ್ನಾಗಿಸಿಕೊಳ್ಳುತ್ತಾಳೆ.

ಹೀಗೆ ಮುಂದೆ ಬಂಜಾರರ ಬಹುದೊಡ್ಡ ಸಾಧುಪುರುಷ, ಬಾಲಬ್ರಹ್ಮಚಾರಿಯಾಗಿ ತಪಸ್ಸು, ಧ್ಯಾನ ಮತ್ತು ಭಕ್ತಿ ಮೂಲಕ ಆರಾಧ್ಯ ದೈವನಾಗಿ ಆಧ್ಯಾತ್ಮಕದ ಮೂಲಕ ಉಪದೇಶಗಳನ್ನು ನೀಡಿ, ಸನ್ಮಾರ್ಗದತ್ತ ಕೊಂಡೊಯ್ದವರು. ತಮ್ಮ ಬುಡಕಟ್ಟಿನ ಜನರಲ್ಲಿ ಧೈರ್ಯ, ಸಾಹಸ, ಆತ್ಮಸ್ಥೈರ್ಯ, ಮತ್ತು ಆತ್ಮಾಭಿಮಾನವನ್ನು ಮೂಡಿಸಿದರು. ಸೇವಾಲಾಲರ ಬೋಧನೆ ಮತ್ತು ಚಿಂತನೆಗಳು ಬಂಜಾರ ಜನಾಂಗದಲ್ಲಿ ಇಂದು ಏಕತೆಯನ್ನುಂಟು ಮಾಡಿರುವುದು ಸ್ಪಷ್ಟ. ಜನರಲ್ಲಿರುವ ಮಿಥ್ಯಾಚರಣೆಗಳನ್ನು ತೊಲಗಿಸಿ, ಅವರ ಬದುಕನ್ನು ಉದ್ದರಿಸಿದ ಕಾಲಜ್ಞಾನಿ. ಇಂದು ಬಂಜಾರರು ಸಾಂಸ್ಕøತಿಕ ನೆಲೆಯಲ್ಲಿ ತನ್ನ ಆಸ್ಮಿತೆಯನ್ನು ಗುರುತಿಸಿಕೊಳ್ಳಲು ಈ ಮಹಾನುಭಾವರ ಸತ್ಕಾರ್ಯಗಳೇ ಕಾರಣ. ಹೀಗಾಗಿ ಬಂಜಾರ ಸಮುದಾಯದಲ್ಲಿ ಸೇವಾಲಲರು ವೀರನಾಗಿ, ವೀರಾಗಿಯಾಗಿ, ಒಬ್ಬ ಶ್ರೇಷ್ಟ ದಾರ್ಶನಿಕನಾಗಿ ಮತ್ತು ಸಾಂಸ್ಕøತಿಕ ನಾಯಕನಾಗಿ ಚಿರಸ್ಥಾಯಿಯಾಗಿದ್ದಾರೆ.

ಸಂತ ಶ್ರೀ ಸೇವಾಲಾಲನು ಜಗನ್ಮಾತೆಯ ಭಕ್ತನಾಗಿ, ತನ್ನನ್ನು ನಂಬಿದ ಭಕ್ತಕೋಟಿಯ ಸಂಸಾರವನ್ನು ಉದ್ದರಿಸುತ್ತಾ, ಅಲ್ಲಲ್ಲಿ ಗುರುಪೀಠ, ಶಕ್ತಿಪೀಠಗಳನ್ನು ಮತ್ತು ಮಠ-ಮಂದಿರಗಳನ್ನು ಕಟ್ಟುತ್ತಾ, ಇಡೀ ಸಮುದಾಯದಲ್ಲಿ ದೈವ ಸ್ವರೂಪಿಯಾಗಿ ನೆಲೆ ನಿಂತರು. ಕರ್ನಾಟಕವನ್ನು ಒಳಗೊಂಡಂತೆ ದೇಶದ ಇತರೆ ಪ್ರದೇಶಗಳಿಗೆ ಪರ್ಯಟನೆ ಕೈಗೊಂಡು, ಭಕ್ತಜನರ ಕಷ್ಟ-ಕಾರ್ಪಣ್ಯಗಳನ್ನು, ದುಖ-ದುಮ್ಮಾನಗಳನ್ನು ಪರಿಹರಿಸುತ್ತಾ, ಲೋಕ ಕಲ್ಯಾಣ ಮಾಡುತ್ತಾ, ಆಧ್ಯಾತ್ಮ ಬೋಧನೆಯನ್ನು ಮಾಡುತ್ತಾ, ದೇಶ ಸಂಚಾರವನ್ನು ಕೈಗೊಳ್ಳುತ್ತಾರೆ. ಸಂತ ಶ್ರೀ ಸೇವಾಲಾಲರ ದೈವ ಶಕ್ತಿಯನ್ನು ತಿಳಿದು ನಿಜಾಮನು ಅವನನ್ನು ಅರಮನೆಗೆ ಕರೆದು ಪಾದಪೂಜೆಯನ್ನು ಮಾಡಿ, ಕಪ್ಪ-ಕಾಣಿಕೆಗಳನ್ನು ನೀಡಿ, ಹೈದರಾಬಾದ್ನ ಕೇಂದ್ರಸ್ಥಾನದಲ್ಲಿ ಅವರ ತಂಡಕ್ಕಾಗಿ ನೆಲೆಯೂರಲು ಒಂದಿಷ್ಟು ಜಾಗವನ್ನು ಅರ್ಪಿಸುತ್ತಾನೆ. ನಿಜಾಮನು ಬಂಜಾರರಿಗೆ ನೀಡಿದ ಆ ಪ್ರದೇಶ ಬಂಜಾರ ಹಿಲ್ಸ್ ಇಂದು ಮಹಾರಾಜ ಗಂಜ್ ಎಂದು ಕರೆಯಲ್ಪಟ್ಟಿದೆ.

ಮುಂಬಯಿಯ “ಸ್ಮತ್ ಭಾವುಚಾ” ಎಂಬ ಸ್ಥಳದಲ್ಲಿ ಹಿಂದೆ ಪೋರ್ಚುಗೀಸರ ಹಡಗು ಸಿಕ್ಕಿ ಹಾಕಿಕೊಂಡಿತ್ತು. ಇದನ್ನು ಸೇವಾಲಾಲ ತಮ್ಮ ಜಾಣತನದಿಂದ ದಡ ಸೇರಿಸಿದ ವೀರರಾಗಿದ್ದರು. ಅದರ ಪ್ರತಿಯಾಗಿ ಪೋರ್ಚುಗೀಸರು ಮುತ್ತಿನ ಹಾರವನ್ನು ಕಾಣಿಕೆಯಾಗಿ ನೀಡಿದ್ದರು. ಅದಕ್ಕಾಗಿ ಇತನನ್ನು ಮೋತಿವಾಳೋ ಎಂದು ಕರೆಯುತ್ತಾರೆ.

ಆರಾಧ್ಯ ದೈವನ ಜನ್ಮಸ್ಥಳ ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೂರುಗೊಂಡನಕೊಪ್ಪದಲ್ಲಿದೆ. ಇತ್ತೀಚೆಗೆ ಹೊಸದಾಗಿ ರಚನೆಗೊಂಡ ನ್ಯಾಮತಿ ತಾಲ್ಲೂಕಿಗೆ ಈ ಗ್ರಾಮ ಸೇರುತ್ತದೆ. ಪ್ರತಿ ವರ್ಷ ಫೆಬ್ರುವರಿ 15 ರಂದು ಜಗದ್ಗುರು ಸಂತ ಶ್ರೀ ಸೇವಾಲಾಲ ಜಯಂತಿ ಪ್ರಯುಕ್ತ ದೇಶದ ನಾನಾ ಭಾಗಗಳಿಂದ ಮಾಲಾಧಾರಿಗಳು ಪಾದಯಾತ್ರೆ ಮೂಲಕ, ಉಳಿದವರು ವಿವಿಧ ವಾಹನಗಳ ಮೂಲಕ ಜಾತ್ರೆಗೆ ಬರುತ್ತಾರೆ.

2018ರ ಫೆಬ್ರುವರಿ 15 ರಂದು ಸೇವಾಲಾಲರ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ಆಚರಿಸುವಂತೆ ಸರ್ಕಾರ ಆದೇಶಿಸಿದ ಹಿನ್ನೆಲ್ಲೆಯಲ್ಲಿ ಸರ್ಕಾರಿ ಕಛೇರಿಗಳಲ್ಲಿ ಸೇವಾಲಾಲರ ಜಯಂತಿ ಆಚರಿಸಲಾಗುತ್ತಿದೆ. ಐತಿಹ್ಯದ ಪ್ರಕಾರ, ಕೊನೆಗೆ ಅಮರನಾಗುತ್ತಾನೆ. ದೇಹಾಂತ್ಯವಾದ ಮೇಲೆ ಮಹಾರಾಷ್ಟ್ರದ ವಾಸಿಮ್ ಜಿಲ್ಲೆಯ ಅಕ್ಕೋಲ ತಾಲೂಕಿನ ಸಮೀಪದಲ್ಲಿರುವ ಪೊಹರಾಗಢ ಎಂಬಲ್ಲಿ ಅಂತ್ಯಸಂಸ್ಕಾರ ನಡೆಯಿತು. ಈಗ ಅಲ್ಲಿ ಸೇವಾಲಾಲ ಮತ್ತು ಜಗನ್ಮಾತೆಯ ಬೃಹತ್ ಮಂದಿರ ಕಟ್ಟಿದ್ದು, ಅದು ಸಮಸ್ತ ಬಂಜಾರರ ಪುಣ್ಯಕ್ಷೇತ್ರವಾಗಿದೆ.

-ಡಾ. ಸಿದ್ದಲಿಂಗ ರಾಠೋಡ್
ಮುಖ್ಯಸ್ಥರು, ವಾಣಿಜ್ಯಶಾಸ್ತ್ರ ವಿಭಾಗ
ಸರಕಾರಿ ಪ್ರಥಮ ದರ್ಜೆ ಕಾಲೇಜು ಕೆಂಭಾವಿ
ತಾ. ಸುರಪುರ ಜಿ. ಯಾದಗಿರ
ಮೊ. 9964718579

Related Articles

Leave a Reply

Your email address will not be published. Required fields are marked *

Back to top button