ತಾಯಿ-ಮಗನಿಗೆ ಪಾಸಿಟಿವ್- ವರದಿ ಬಾರದ ತಂದೆ ಗರಂ
ಸಗರ ಕ್ವಾರಂಟೈನ್ ಕೇಂದ್ರದಲ್ಲಿರುವ ತಾಯಿ, ಮಗನಿಗೆ ಪಾಸಿಟಿವ್
ತಾಯಿ-ಮಗನಿಗೆ ಪಾಸಿಟಿವ್ ತಂದೆಯ ವರದಿ ಬಾಕಿ
ಶಹಾಪುರಃ ಕ್ವಾರಂಟೈನ್ ಕೇಂದ್ರದಲ್ಲಿದ್ದ 14 ಜನರಲ್ಲಿ ತಂದೆ-ತಾಯಿ ಮತ್ತು 20 ವರ್ಷದ ಮಗ ಸಹ ಇದ್ದರು, ರವಿವಾರ ತಾಯಿ ಮತ್ತು ಮಗನ ವರದಿ ಬಂದಿದ್ದು, ಈ ಇಬ್ಬರಿಗೂ ಕೊರೊನಾ ಸೋಂಕು ತಗುಲಿದೆ ಆದರೆ ಜೊತೆಗಿದ್ದ ತಂದೆಯ ಪರೀಕ್ಷಾ ವರದಿ ಬಾರದಿರುವದು ತಂದೆಯನ್ನು ಕೆರಳಿಸಿದ ಘಟನೆ ತಾಲೂಕಿನ ಸಗರ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಕ್ವಾರಂಟೈನ್ ಕೇಂದ್ರದಲ್ಲಿ ರವಿವಾರ ನಡೆದಿದೆ.
ಸಗರ ಗ್ರಾಮದವರೇ ಆಗಿದ್ದ ಈ ಮೂವರು, ಗುಜರಾತ್‍ಗೆ ಕೂಲಿ ಕೆಲಸಕ್ಕೆಂದು ತೆರಳಿದ್ದರು ಎನ್ನಲಾಗಿದೆ. ತಂದೆ, ತಾಯಿ ಮತ್ತು 20 ವರ್ಷದ ಮಗ ಲಾಕ್ ಡೌನ್ ಹಿನ್ನೆಲೆ ಮರಳಿ ಸ್ವಗ್ರಾಮಕ್ಕೆ ವಾಪಾಸಾಗಿದ್ದರು.
ಆಗ ಪರೀಕ್ಷೆಗೆ ಒಳಪಡಿಸಿ ಇವರನ್ನು ಸ್ವಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿಯೇ ಇಡಲಾಗಿತ್ತು. ಇದೀಗ ಪರೀಕ್ಷಾ ವರದಿಯಲ್ಲಿ ತಾಯಿ-ಮಗನಿಗೆ ಕೊರೊನಾ ಪಾಸಿಟಿವ್ ಬಂದಿದೆ ಎನ್ನಲಾಗಿದೆ.
ಹೀಗಾಗಿ ಇಲ್ಲಿನ ಆಶಾ ಕಾರ್ಯಕರ್ತರು ಇವರನ್ನು ಐಸುಲೇಷನ್ ವಾರ್ಡ್‍ಗೆ ಕರೆದೊಯ್ಯುವಾಗ ತಂದೆ ತನ್ನ ವರದಿಯೂ ತರಬೇಕಿತ್ತು ಎಂದು ಆಶಾ ಕಾರ್ಯಕರ್ತರೊಂದಿಗೆ ಕಿರಿಕಿರಿ ಮಾಡಿದ್ದಾರೆ. ಆಗ ಗ್ರಾಮಸ್ಥರು ಕ್ವಾರಂಟೈನ್ ಕೇಂದ್ರ ಮುಂದೆ ಜಮಾವಣೆಗೊಂಡಿದ್ದಾರೆ. ತಂದೆಯನ್ನು ಸಮಾಧಾನ ಪಡಿಸಿ ತಾಯಿ ಮತ್ತು 20 ವರ್ಷ ದ ಮಗನನ್ನು ಚಿಕಿತ್ಸೆಗಾಗಿ ಸುರಪುರದ ಐಸುಲೇಷನ್ ವಾರ್ಡ್‍ಗೆ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ.
ಕೋವಿಡ್-19 ಕುರಿತು ಮಾಹಿತಿ ನೀಡದ ಆರೋಗ್ಯ ಇಲಾಖೆ
ಆರೊಗ್ಯ ಇಲಾಖೆ ತಾಲೂಕು ಅಧಿಕಾರಿಗಳು ಕೋವಿಡ್-19 ಕುರಿತು ಯಾವುದೇ ಸಮರ್ಪಕ ಮಾಹಿತಿ ಮಾಧ್ಯಮಕ್ಕೆ ನೀಡುತ್ತಿಲ್ಲ. ವರದಿಗಾರರು ಕಾಲ್ ಮಾಡಿದರೂ ರಿಸೀವ್ ಮಾಡಲ್ಲ. ರಿಸೀವ್ ಮಾಡಿದರೂ ಇನ್ನು ಸುದ್ದಿ ಹಾಕಬೇಡಿ ಆಮೇಲೆ ಹೇಳುತ್ತೇವೆ. ಮೀಟಿಂಗ್ ನಲ್ಲಿದ್ದೇವೆ ಎಂದು ಜಾರಿಕೊಳ್ಳುತ್ತಿದ್ದಾರೆ.
ಈ ಕುರಿತು ಜಿಲ್ಲಾ ಡಿಎಚ್‍ಓ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ತಾಲೂಕಿನಲ್ಲಿ ಕೋವಿಡ್-19 ಕುರಿತು ಸಮರ್ಪಕ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕು. ಜವಬ್ದಾರಿಯುತ ಅಧಿಕಾರಿಗಳು ಜಾರಿಕೊಳ್ಳುವದೇಕೆ.? ಈ ಕುರಿತು ಕೂಡಲೇ ಜಿಲ್ಲಾಡಳಿತ ಗಮನಹರಿಸಬೇಕು.