ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವ ಭರವಸೆ, ನಗರಸಭೆ ಕಾರ್ಮಿಕರ ಮುಷ್ಕರ ಅಂತ್ಯ, ಇಪಿಎಫ್, ಇಎಸ್‍ಐ ಅಕ್ರಮ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸುವೆ – ಕಟ್ಟಿಮನಿ
ಬೇರಡೆ ನಿಯೋಜನೆಗೊಳಿಸಿದ ಇಬ್ಬರ ಆದೇಶ ರದ್ಧತಿ ಡಿಸಿಗೆ ಬಿಟ್ಟಿದ್ದು - ಪಿಡಿ
ನಗರಸಭೆ ಕಾರ್ಮಿಕರ ಮುಷ್ಕರ ಅಂತ್ಯ
ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ ಪಿಡಿ ಲಕ್ಷ್ಮೀಕಾಂತ
ಬೇರಡೆ ನಿಯೋಜನೆಗೊಳಿಸಿದ ಇಬ್ಬರ ಆದೇಶ ರದ್ಧತಿ ಡಿಸಿಗೆ ಬಿಟ್ಟಿದ್ದು – ಪಿಡಿ
ಯಾದಗಿರಿ, ಶಹಾಪುರಃ ಕಳೆದ ಎರಡು ದಿನದಿಂದ ಇಪಿಎಫ್, ಇಎಸ್‍ಐ ಹಣ ಜಮೆ ಮಾಡುವದು ಸೇರಿದಂತೆ ಏಕಾಏಕಿ ಪೌರ ನೌಕರರ ಸಂಘದ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯನ್ನು ಬೇರಡೆ ನಿಯೋಜನೆಗೊಳಿಸಿರುವದನ್ನು ಖಂಡಿಸಿ ಇಲ್ಲಿನ ನಗರಸಭೆ ಪೌರ ಕಾರ್ಮಿಕರು ಬುಧವಾರ ಬೆಳ್ಳಂಬೆಳಗ್ಗೆಯಿಂದಲೇ ನಿರಂತರ ಆಹೋರಾತ್ರಿ ಧರಣಿ ನಡೆಸಿದ್ದರು.
ಗುರುವಾರು ಮದ್ಯಾಹ್ನ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಲಕ್ಷ್ಮಿಕಾಂತ ಅವರು ಪ್ರತಿಭಟನಾ ನಿರತರೊಡನೆ ಚರ್ಚಿಸಿದರು. ಈ ವೇಳೆ ಧರಣಿನಿರತರು, ಇಪಿಎಫ್, ಇಎಸ್‍ಐ ಹಣ ಕಳೆದ 6-7 ವರ್ಷದಿಂದ ನಮ್ಮ ಖಾತೆಗೆ ಜಮೆ ಯಾಗಿರುವದಿಲ್ಲ. ಅಲ್ಲದೆ ನಮ್ಮ ವೇತನದಿಂದ ಕಡಿತಗೊಳಿಸಲಾದ ಹಣ ಎಲ್ಲಿಗೆ ಹೋಯಿತು.? ಈ ಕೂಡಲೇ ಜಮೆ ಮಾಡಬೇಕೆಂದು ಆಗ್ರಹಿಸಿದರು.
ಅಲ್ಲದೆ ಇಪಿಎಫ್ ಹಣ ಕೆನರಾ ಬ್ಯಾಂಕ್‍ಗೆ ಹೋಗಿ ಕೇಳಿದರೆ ಅಲ್ಲಿ ಬೇರೊಂದು ಅಕೌಂಡ್ ಕ್ರಿಯೇಟ್ ಮಾಡಿ ಹಣವನ್ನು ಲಪಟಾಯಿಸಿರುವದು ಬೆಳಕಿಗೆ ಬಂದಿದೆ. ಈ ಕುರಿತು ಸೂಕ್ತ ತನಿಖೆ ನಡೆಸಿ ನಮ್ಮ ಹಣ ನಮ್ಮಗಳ ಖಾತೆಗೆ ಜಮೆ ಮಾಡಬೇಕು.
ಅಲ್ಲದೆ ನ್ಯಾಯಯುತ ಬೇಡಿಕೆ ಕೇಳಿದ ನಮ್ಮ ಸಂಘದ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯನ್ನು ಏಕಾಏಕಿಯಾಗಿ ಬೇರಡೆ ನಿಯೋಜನೆಗೊಳಿಸುವ ಹುನ್ನಾರವಾದರೂ ಏನು.? ಈ ಕೂಡಲೇ ಅವರ ನಿಯೋಜನೆ ಆದೇಶ ರದ್ದುಗೊಳಿಸಿ ಯಥಾ ಪ್ರಕಾರ ಇಲ್ಲಿಯೇ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಅಲ್ಲದೆ ಕಳೆದ 10 ತಿಂಗಳಿಂದ 18 ಜನ ನೌಕರರ ವೇತನ ಬಿಡುಗಡೆಗೊಳಿಸಿರುವದಿಲ್ಲ. ಮತ್ತು ಹಳೇ ನೌಕರರದು ನಾಲ್ಕು ತಿಂಗಳಿಂದ ವೇತನ ಬಿಡುಗಡೆ ಮಾಡಿರುವದಿಲ್ಲ ನಮ್ಮಗಳ ಜೀವನ ಹೇಗೆ.? ಈ ಕೂಡಲೇ ವೇತನ ಬಿಡುಗಡೆಗೊಳಿಸಬೇಕು. ಮತ್ತು ಇಎಸ್‍ಐ ಕಾರ್ಡ್ ಮಾಡಿ ಕೊಡಬೇಕು. ಕಳೆದ ಏಳೆಂಟು ತಿಂಗಳಿಂದ ಬೇಡಿಕೆಗಾಗಿ ಆಗ್ರಹಿಸುತ್ತಲೇ ಬಂದಿದ್ದೇವೆ. ಬರಿ ಮಾತಿನ ಭರವಸೆ ನೀಡಿ ಮುಂದೂಡತ್ತಾ ಬರಲಾಗಿದೆ. ಈ ಕೂಡಲೇ ಇಎಸ್‍ಐ ಕಾರ್ಡ್ ವಿತರಣೆ ಮಾಡಬೇಕು. ಕಾರ್ಮಿಕರಿಗಾಗಲಿ ಅವರ ಕುಟುಂಬಕ್ಕಾಗಲಿ ಅನಾರೋಗ್ಯ ಸಮಸ್ಯ ಉಂಟಾದರೆ ಯಾರು ಜವಬ್ದಾರರು.? ಈಗಾಗಲೇ ಇಬ್ಬರು ಕಾರ್ಮಿಕರು ಅನಾರೋಗ್ಯದಿಂದ ಮೃತಪಟ್ಟಿರುತ್ತಾರೆ. ಈಎಸ್‍ಐ ಕಾರ್ಡ್ ಮಾಡಿಸಿದ್ದರೆ, ಮೃತ ಕುಟುಂಬ ಸದಸ್ಯರಿಗೆ ಐದು ಲಕ್ಷ ರೂ. ಪರಿಹಾರ ಮೊತ್ತ ಬರುತಿತ್ತು. ಅಲ್ಲದೆ ಆಸ್ಪತ್ರೆ ಖರ್ಚು ಕೂಡ ನೀಡಲಾಗುತಿತ್ತು, ಅಧಿಕಾರಿಗಳ ನಿರ್ಲಕ್ಷದಿಂದ ಕಾರ್ಮಿಕರಿಗೆ ದೊರೆಯಬೇಕಿದ್ದ ಸೌಲಭ್ಯ ಸಿಗಲಿಲ್ಲ. ನಮ್ಮ ವೇತನದಲ್ಲಿ ಇಎಸ್‍ಐ ಹಣ ಕಡಿತಗೊಂಡರು ಕಾರ್ಡ್ ನೀಡದ ಪರಿಣಾಮ ಜೀವ ಸಮೇತ ಹಣವು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಇದಕ್ಕೆಲ್ಲ ಅಧಿಕಾರಿ ವರ್ಗವೇ ಕಾರಣ ಎಂದು ದೂರಿದರು. ಇವೆಲ್ಲ ಸಮಸ್ಯೆಗಳಿಗೆ ಕಾರಣಿಭೂತರಾದ ನಗರಸಭೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ಧರಣಿನಿರತರ ಎಲ್ಲಾ ಬೇಡಿಕೆಗಳನ್ನು ಆಲಿಸಿದ ಪಿಡಿ ಲಕ್ಷ್ಮೀಕಾಂತ, ಈ ಕೂಡಲೇ ತನಿಖಾ ತಂಡದ ಮೂಲಕ ಇಪಿಎಫ್ ಮತ್ತು ಇಎಸ್‍ಐ ಹಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮಕೈಗೊಳ್ಳಲಾಗುವುದು. ಈ ಕೂಡಲೇ ಇಪಿಎಫ್, ಇಎಸ್‍ಐ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಆದರೆ ಬೇರಡೆ ನಿಯೋಜನೆಗೊಂಡ ಇಬ್ಬರನ್ನು ಮರು ಆದೇಶ ಮಾಡುವದು ಡಿಸಿ ಅವರ ಕೈಯಲ್ಲಿದೆ. ಈ ಕುರಿತು ಅವರ ಗಮನಕ್ಕೆ ತರುವೆ ನನ್ನನ್ನು ನಂಬಿ ಎಂದು ಧರಣಿನಿರತರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು. ಮೇಲಧಿಕಾರಿ ಪಿಡಿ ಲಕ್ಷ್ಮೀಕಾಂತ ಅವರ ಭರವಸೆ ಮೇರೆಗೆ ಧರಣಿನಿರತರು ನಿರಂತರ ಪ್ರತಿಭಟನೆಗೆ ತಾತ್ಕಾಲಿಕವಾಗಿ ವಾಪಸ್ ಪಡೆದಿರುವುದಾಗಿ ತಿಳಿಸಿದರು.
ಬುಧವಾರ ಬೆಳ್ಳಂಬೆಳಗ್ಗೆಯಿಂದ ಕಾರ್ಮಿಕರು ತಮ್ಮ ಇಪಿಎಫ್, ಇಎಸ್‍ಐ ಹಣ ಸಂದಾಯ ಮಾಡುವಂತೆ ಆಗ್ರಹಿಸಿ ನಗರಸಭೆ ಮುಂದೆ ಆಹೋರಾತ್ರಿ ಧರಣಿ ಆರಂಭಿಸಿದ್ದರು. ಬುಧವಾರ ರಾತ್ರಿ ಸ್ಥಳದಲ್ಲಿಯೇ ಅಡುಗೆ ಮಾಡಿಕೊಂಡು ರಾತ್ರಿಯು ಅಲ್ಲಿಯೇ ಮಲಗಿದ್ದರು. ಗುರುವಾರ ಬೆಳ್ಳಂಬೆಳಗ್ಗೆಯೇ ಧರಣಿ ಹಾಗೇ ಮುಂದುವರೆದಿತ್ತು. ಗುರುವಾರ 3 ಗಂಟೆಯವರೆಗೆ ಪಿಡಿ ಅವರ ಸ್ಥಳಕ್ಕೆ ಆಗಮಿಸಿ ಭರವಸೆ ನೀಡಿದ ಹಿನ್ನೆಲೆ ಧರಣಿ ವಾಪಸ್ ಪಡೆಯಲಾಯಿತು.
ಕಾರ್ಮಿಕರಿಬ್ಬರನ್ನು ಬೇರಡೆ ನಿಯೋಜನೆಗೊಳಿಸಲು ಹಲವು ಮಾನದಂಡನೆಗಳನ್ನು ಉಪಯೋಗಿಸಲಾಗಿದೆ. ಈಗ ಕಾರ್ಮಿಕರ ಹೇಳಿದ ಪ್ರಕಾರ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಮುಂದಿನ ಆದೇಶ ಅವರಿಗೆ ಬಿಟ್ಟಿದ್ದು, ಆದರೆ ಇಪಿಎಫ್, ಇಎಸ್‍ಐ ಹಣ ಜಮೆ ಮಾಡುವಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ತನಿಖಾ ತಂಡದ ಮೂಲಕ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವದು.
-ಲಕ್ಷ್ಮೀಕಾಂತ. ಪಿಡಿ ಯಾದಗಿರಿ.
ಇಪಿಎಫ್, ಇಎಸ್‍ಐ ಅಕ್ರಮ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸುವೆ – ಕಟ್ಟಿಮನಿ
ನಗರಸಭೆಯಲ್ಲಿ ಕಾರ್ಮಿಕರ ಇಪಿಎಫ್, ಇಎಸ್‍ಐ ಹಣ ಜಮೆ ಮಾಡುವಲ್ಲಿ ಬಹು ದೊಡ್ಡ ಅಕ್ರಮ ನಡೆದಿದ್ದು, ಅದರಲ್ಲಿ ‘ಡಿ’ ಗ್ರೂಪ್ ನೌಕರರು ಬಿಟ್ಟು ಅಕೌಂಟಟ್ ಒಳಗೊಂಡು ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿ ಅಕ್ರಮ ಎಸಗಿರುವ ಕುರಿತು ಇಷ್ಟರಲ್ಲಿಯೇ ಲೋಕಾಯುಕ್ತರಿಗೆ ದೂರು ಸಲ್ಲಿಸುವೆ ಎಂದು ಧರಣಿನಿರತರಿಗೆ ಬೆಂಬಲ ವ್ಯಕ್ತಪಡಿಸಿ ಭಾಗವಹಿಸಿ ಕಲ್ಯಾಣ ಕರ್ನಾಟಕ ಯುವ ಸೇನೆಯ ಜಿಲ್ಲಾಧ್ಯಕ್ಷ ಭೀಮಾಶಂಕರ ಕಟ್ಟಿಮನಿ ತಿಳಿಸಿದ್ದಾರೆ.
ಇಪಿಎಫ್ ಅಮೌಂಟ್ 6-7 ವರ್ಷದಿಂದ ಕಾರ್ಮಿಕರ ಹೆಸರಲ್ಲಿ ಜಮೆಯಾಗಿರುವದಿಲ್ಲ. ಆದರೆ ಅವರ ವೇತನದಿಂದ ಪ್ರತಿ ತಿಂಗಳು ಹಣ ಕಡಿತಗೊಂಡಿದೆ. ಅದರಲ್ಲೂ ಪ್ರತಿಯೊಬ್ಬ ನೌಕರರ ವೇತನದಲ್ಲಿ ನಿಯಮನುಸಾರ ಶೇ.12 ರಷ್ಟು ಇಪಿಎಫ್ ಹಣ ಕಡಿತಗೊಳಿಸಬೇಕಿತ್ತು ಆದರೆ ಇಲ್ಲಿ ಶೇ.20 ರಷ್ಟು ಹಣ ಕಡಿತಗೊಳಿಸಲಾಗಿದೆ. ಅದಕ್ಕೆ ಪ್ರತಿ ವರ್ಷ ಬಡ್ಡಿ ಸೇರಿಸಿ ಸರ್ಕಾರ ಇಪಿಎಫ್ ಹಣ ಜಮೆ ಮಾಡಬೇಕು. ಕಾರ್ಮಿಕರ ಇಪಿಎಫ್, ಇಎಸ್‍ಐ ಹಣ ಬೇರೆ ಅಕ್ರಮ ಅಕೌಂಟ್ ರೂಪಿಸಿ ಅದರಿಂದ ಸುಮಾರು 49 ಲಕ್ಷ ಅಕ್ರಮವಾಗಿ ಬಳಕೆ ಮಾಡಿಕೊಂಡಿರುವದು ತಿಳಿದು ಬಂದಿದೆ.
ಇವರ ಮೇಲೆ ಕ್ರಮಕ್ಕೆ ಮುಂದಾಗದ ಯೋಜನಾ ನಿದೇರ್ಶಕರು (ಪಿಡಿ), ಜಿಲ್ಲಾಧಿಕಾರಿಗಳು, ತಮಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಕಾರ್ಮಿಕರ ವಿರುದ್ಧವೆ ಕ್ರಮಕೈಗೊಂಡಿರುವದು ಹಾಸ್ಯಸ್ಪದವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯಿಂದ ಈ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವದು. ಈ ಕುರಿತು ವಿವಿಧ ಪತ್ರಿಕೆಗಳಲ್ಲಿ ಮೂರು ನಾಲ್ಕು ತಿಂಗಳ ಹಿಂದೆಯೇ ಬಂದಿವೆ. ಅಲ್ಲದೆ ಕಾರ್ಮಿಕರ ಸಂಘ ಕಳೆದ ವಾರದ ಹಿಂದೆಯೇ ಜಿಲ್ಲಾಧಿಕಾರಿಗಳು ಮನವಿ ಮಾಹಿತಿ ಕೊಟ್ಟು ಬಂದಿದೆ. ಆದಾಗ್ಯು ನಮ್ಮ ಗಮನಕ್ಕೆ ಬಂದಿಲ್ಲ ಎನ್ನುವ ಪಿಡಿ ಉತ್ತರ ನೋಡಿದರೆ ಇದರಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ ಎಂಬುದನ್ನು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಮುಗ್ಧ ಕಾರ್ಮಿಕರಿಗೆಲ್ಲ ಇದು ಅರ್ಥವಾಗುವದಿಲ್ಲ. ನಾವು ಈ ಹೋರಾಟ ಮುಂದುವರೆಸಲಿದ್ದೇವೆ ಎಂದರು.