ಸಂಶಯಾಸ್ಪದ ಸಾವು, ಅಸ್ತಿ ಪಂಜರ ಪತ್ತೆ, ಹಸಿರು ಶರ್ಟ್, ಕಪ್ಪು ಪ್ಯಾಂಟ್, ಶೂ ಧರಿಸಿದ್ದ ವ್ಯಕ್ತಿ.!
ಕೊಳೆತ ಶವ, ಬಟ್ಟೆ, ಬೂಟು ಸ್ಥಳದಲ್ಲಿ ಪತ್ತೆ, ತನಿಖೆ ಚುರುಕು
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದ ಡಿಗ್ರಿ ಕಾಲೇಜು ಹತ್ತಿರ ದಿಗ್ಗಿ ಸಂಗಮೇಶ್ವರ ದೇವಸ್ಥಾನಕ್ಕೆ ತೆರಳುವ ಮಾರ್ಗ ಮಧ್ಯ ಕಾಲೇಜಿಗೆ ಸೇರಿದ್ದ ಹುಸಣಿಗಿಡ, ಜಾಲಿಗಿಡಗಳ ಬೆಳೆದ ಪ್ರದೇಶದಲ್ಲಿ ಸಂಶಯಾಸ್ಪದ ಶವವೊಂದು ಅಸ್ತಿ ಪಂಜರ ರೂಪದಲ್ಲಿ ಪತ್ತೆಯಾದ ಘಟನೆ ಶನಿವಾರ ನಡೆದಿದೆ.
ಅಂದಾಜು ಎರಡು ತಿಂಗಳನಿಂದ ಶವವೊಂದು ಜಾಲಿ, ಹುಣಸೆಗಿಡಗಳ ಹುಲ್ಲುಗಾವಲಿನಲ್ಲಿ ಬಿದ್ದಿದ್ದು, ಹುಣಸೆಹಣ್ಣು ಹರಿಯಲು ತೆರಳಿದ್ದ ಹುಡುಗರ ಕಣ್ಣಿಗೆ ಶವ ಕಾಣಿಸಿಕೊಂಡಿದ್ದು, ನಗರದಲ್ಲಿ ಸುದ್ದಿ ಹಬ್ಬಿದೆ. ತಕ್ಷಣ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಕರಿ ಪ್ಯಾಂಟ್ ಮತ್ತು ಹಸಿರು ಶರ್ಟ್ ಧಿರಿಸಿದ್ದ ಎನ್ನಲಾಗಿದ್ದ, ಅಸ್ತಿ ಪಂಜರ ದೊರೆತಿದೆ. ಈ ಶವ ಸುಮಾರು ತಿಂಗಳ ಹಿಂದೆಯೇ ಬಿದ್ದಿರಬಹುದು ಎಂದು ಊಹಿಸಲಾಗಿದೆ. ಅಸ್ತಿ ಪಂಜರ ಸಮೇತ ಪೊಲೀಸರು ಅಲ್ಲಿ ದೊರೆತ ವಸ್ತುಗಳನ್ನು ನಗರ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ವೈದ್ಯಕೀಯ ತಪಾಸಣೆಗೆ ದಾಖಲಿಸಿದ್ದಾರೆ.
ವೈದ್ಯರ ಪ್ರಕಾರ ಶರ್ಟ್, ಪ್ಯಾಂಟ್ ಮತ್ತು ಒಳ ಚಡ್ಡಿಯ ಅಳತೆ ಆಧರಿಸಿ ಅಂದಾಜು 20 ರಿಂದ 25 ವಯಸ್ಸಿನ ಯುವಕನಾಗಿರಬಹುದು ಎಂದು ಅಂದಾಜಿಸಿದ್ದಾರೆ. ಯಾವುದೇ ಸಮರ್ಪಕ ಕುರುಹು ಸಿಗದ ಕಾರಣ, ಪೊಲೀಸರು ಈ ಬಟ್ಟೆ, ಬರೆ, ಬೂಟು ಸಮೇತ ಅಸ್ತಿ ಪಂಜರವನ್ನು ಹೆಚ್ಚಿನ ತಪಾಸಣೆಗಾಗಿ ಕಲಬುರ್ಗಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ನಗರಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಸಿಪಿಐ ನಾಗರಾಜ ಅವರು ತಿಳಿಸಿದ್ದಾರೆ.