ಪ್ರಮುಖ ಸುದ್ದಿ

ಆಕ್ಸಿಜನ್ ಉತ್ಪಾದನಾ ಘಟಕ ಶೀಘ್ರ ಆರಂಭಿಸಲು ಸಚಿವ ಆರ್.ಶಂಕರ್ ಸೂಚನೆ

ಕೋವಿಡ್ ಅಸ್ಪತ್ರೆ, ಎಲ್‍ಎಂಓ ಘಟಕ ವೀಕ್ಷಿಸಿದ ಉಸುವಾರಿ ಸಚಿವ ಆರ್.ಶಂಕರ್

ಯಾದಗಿರಿ: ಜಿಲ್ಲಾ ಕೋವಿಡ್-19 ಅಸ್ಪತ್ರೆಗೆ ಅಗತ್ಯ ಅಮ್ಲಜನಕ ಪೂರೈಕೆ ಕ್ರಮಕೈಗೊಳ್ಳುತ್ತಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಂಜೂರಾಗಿರುವ ಆಕ್ಸಿಜನ್ ಉತ್ಪಾದನಾ ಘಟಕವನ್ನು ಶೀಘ್ರ ಆರಂಭಿಸುವಂತೆ ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಆರ್. ಶಂಕರ್ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದರು.

ಸೋಮವಾರ ನಗರದ ಜಿಲ್ಲಾ ಕೋವಿಡ್-19 ಆಸ್ಪತ್ರೆ ಮತ್ತು ಲಿಕ್ವಿಡ್ ಮೆಡಿಕಲ್ ಅಕ್ಸಿಜನ್ ಪ್ಲಾಂಟ್ ( ಎಲ್‍ಎಂಓ) ವೀಕ್ಷಿಸಿ ಅವರು ಮಾತನಾಡುತ್ತಿದ್ದರು.

ನೂತನ ಆಕ್ಸಿಜನ್ ಉತ್ಪಾದನಾ ಘಟಕದಿಂದ ಒಂದು ನಿಮಿಷಕ್ಕೆ 500 ಲೀಟರ್ ಅಕ್ಸಿಜನ್ ಉತ್ಪಾದನೆಯಾಗುತ್ತಿದ್ದು, ಇದರಿಂದ ಕೊರತೆ ನೀಗಲಿದೆ. ಶೀಘ್ರ ಈ ಘಟಕ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕೆಂದು ಹೇಳಿದರು.

ಜಿಲ್ಲಾಧಿಕಾರಿ ರಾಗಪ್ರಿಯಾ ಆರ್.ಅವರು ಮಾತನಾಡಿ, ಪ್ರಸಕ್ತ ಇರುವ ಎಲ್‍ಎಂಓ ಪ್ಲಾಂಟ್‍ನಲ್ಲಿ ಅಗತ್ಯಕ್ಕೆ ತಕ್ಕಂತೆ ಅಕ್ಸಿಜನ್ ಪೂರೈಕೆಯಾಗುತ್ತಿಲ್ಲ. ಕೂಡಲೇ ಪೂರ್ಣ ಪ್ರಮಾಣದ ಆಕ್ಸಿಜನ್ ಪೂರೈಕೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕೊರತೆ ಇರುವ ಲಿಕ್ವಿಡ್ ಮೆಡಿಕಲ್ ಅಕ್ಸಿಜನ್ ನನ್ನು ಪೂರೈಸುವಂತೆ ಸಂಬಂಧಪಟ್ಟವರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಜಂಬೋ ಸಿಲಿಂಡರ್ ಸಂಗ್ರಹಗಾರವನ್ನು ಸಚಿವರು ವೀಕ್ಷಿಸಿದರು. ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, 96 ಜಂಬೋ ಸಿಲಿಂಡರ್‍ಗಳಿದ್ದು, ಇವುಗಳನ್ನು ಬ್ಯಾಕ್‍ಅಪ್‍ಗಾಗಿ ಬಳಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಹಾಗೂ ಸುರಪುರ ಶಾಸಕ ರಾಜೂಗೌಡ, ನಿಜಶರಣ ಅಂಬಿಗರ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬೂ ರಾವ್ ಚಿಂಚಿನಸೂರ, ಯಾದಗಿರಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ್, ಎಂಎಲ್‍ಸಿ ಶಶಿಲ್ ನಮೋಶಿ, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ್ ಚಂಡ್ರಿಕಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಸರ್ಜನ್(ಪ್ರಭಾರ) ಸಂಜೀವ್ ಕುಮಾರ್ ರಾಯಚೂರಕರ್, ಜಿಲ್ಲಾ ಅಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ. ನೀಲಮ್ಮ, ಜಿಲ್ಲಾಸ್ಪತ್ರೆಯ ಕ್ವಾಲಿಟಿ ಮ್ಯಾನೇಜರ್ ಪ್ರಸಾದ್ ಮುಂತಾದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button