ಕಾವ್ಯ
ಸರ್ಕಾರಕ್ಕೆ ಕೊಡುವೆ ಸಾಲ
ಅನ್ನದಾತನ ಸ್ವಾಗತ
ಕಿತ್ತು ತಿನ್ನುವ ಖುಳರ ನಡುವೆ
ಬಿತ್ತಲೇನು ನಾನು..?
ಮಾನವತೆ ಮರೆತವರ ಮಧ್ಯ
ಬೆಳೆಯಲೇನು ನಾನು..?
ಖೊಟ್ಟಿ ಬೀಜವ ಮಾರಿ
ಮಾಯವಾಗುವ
ಅಲ್ಪ ಬೆಳೆದ ಬೆಳೆಗೆ
ಸ್ವಲ್ಪ ಬೆಲೆ ಕಟ್ಟುವ
ನಗ್ನಗೊಂಡು ನಿಂತವರ
ಮಧ್ಯ ಮಾನಮುಚ್ಚಿಕೊಂಡ
ಹುಚ್ಚನು ನಾನು..!
ಅವಯಿಟ್ಟ ಬೆಲೆಗೆ
ನಾ ಕೊಳ್ಳಬೇಕು
ಅವಕೊಟ್ಟ ಬೆಲೆಗೆ
ನಾ ಮಾರಬೇಕು..
ಸಾಲಮನ್ನಾವೆಂಬ
ಮತ ಮಹಾಭಾರತ
ನಾಟಕದಿ, ಅಜ್ಞಾತವಾಸದ
ಬೃಹನ್ನಳೆ ನಾನು..!
ಪರಿಹಾರ ಪಡೆದವರಲಿ
ಮಣ್ಣಿನ ಮಗನಾರೋ..?
ಮಣ್ಣೇ ಮೈಗಂಟಿಸಿಕೊಳದ
ಜುಬ್ಬಾ ಚೊಣ್ಣಿ ಯಾರೋ..?
ಶಕ್ತಿ ಸೌಧದಿಂದುರುಳಿದ ನಾಣ್ಯ
ಕೈ ಬದಲಾಗುತ್ತ ಸೇರುವುದು
ಸವೆದ ದಮಡಿಯಾಗಿ..
ಬೇಕಿಲ್ಲ ನನಗೆ ಕನಿಕರದ ಕಾಸು
ಬರಲಿ ವಿದ್ಯುತ್, ನೀರು ಇಪ್ಪತ್ನಾಲ್ಕು ತಾಸು
ಬೆಳೆದು ತೋರಿಸುವೆ ನೆಲ ತುಂಬ ಫಸಲ
ಬನ್ನಿ ಕೊಡುವೆ ನಿಮ್ಮ ಸರ್ಕಾರಕ್ಕೇ ಸಾಲ..!
– ಬಸವರಾಜ. ಎಂ.ಕಿರಣಗಿ. ಇಂಡಿ