ಸಂಸ್ಕೃತಿ

ಮೋಹರಂ ಹಬ್ಬದ ಬಗ್ಗೆ ನಿಮಗೆಷ್ಟು ಗೊತ್ತು..? ಇದನ್ನೋದಿ..

ಹಜರತ್ ಹಸನ್ ಮತ್ತು ಹುಸೇನರ ಪುಣ್ಯ ಸ್ಮರಣೆಯ ನಿಮಿತ್ತ ಈ ಹಬ್ಬ ಆಚರಣೆ

ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಮೋಹರಂ

ನಂಬಿಕೆ ಮತ್ತು ಸಂಪ್ರದಾಯಗಳ ಕ್ರಿಯಾ ರೂಪಗಳೇ ಹಬ್ಬಗಳು. ಹಬ್ಬಗಳಲ್ಲಿ ನಮ್ಮ ಜನರು ಹಲವು ಬಗೆಯಾಗಿ ಆಚರಿಸುತ್ತಾರೆ. ಅಂತಹ ಹಲವು ಹಬ್ಬಗಳಲ್ಲಿ ಭಾವೈಕ್ಯತೆಯನ್ನು ಸಾರುವ ಮೊಹರಂ ಹಬ್ಬವು ಯಾವುದೇ ತಾರತಮ್ಯವಿಲ್ಲದೇ ಹಿಂದೂಗಳು ಸಹ ಪಾಲುಗೊಳ್ಳುವುದು ಈ ಹಬ್ಬದ ಒಂದು ವಿಶೇಷ. ಹಿಂದೂ ಮುಸ್ಲಿಂ ಭಾಂಧವ್ಯಕ್ಕೆ ಈ ಆಚರಣೆ ಒಳ್ಳೆಯ ಉದಾಹರಣೆಯಾಗಿ ನಡೆದುಕೊಂಡು ಬರುತ್ತದೆ. ಗ್ರಾಮೀಣ ಜನಪದ ಪರಿಸರದಲ್ಲಿ ಮೊಹರಂ ವಿಶಿಷ್ಠ ಸಾಂಸ್ಕೃತಿಕ ಆಚರಣೆಯಾಗಿದೆ.

ಮೊಹರಂನಿಂದ ಇಸ್ಲಾಮಿ ವರ್ಷ ಆರಂಭವಾಗುತ್ತದೆ. ಅಂದರೆ ಮೊಹರಂ ಮಹಮ್ಮದಿಯರ ಮೊದಲ ತಿಂಗಳು. ಈ ಮಾಸದ ಹತ್ತನೇ ದಿನ ಮೊಹರಂ ಹಬ್ಬ ಆಚರಿಸುತ್ತಾರೆ. ಈ ಹಬ್ಬಕ್ಕೆ ಒಂದು ಚಾರಿತ್ರೀಕ ಹಾಗೂ ಧಾರ್ಮಿಕ ಹಿನ್ನಲೆಯಿದೆ. ಇಸ್ಲಾಂ ಧರ್ಮದ ಸಂಸ್ಥಾಪಕರಾದ ಮಹಮ್ಮದ ಪೈಗಂಬರರ ಕೊನೆಯ ಅವರ ಪುತ್ರಿ  ಫಾತಿಮಾಬೇಬಿ ಅವಳ ಪತಿ ಹಜರತ್‍ಆಲಿಯು ನಾಲ್ಕನೇ ಖಲೀಫರಾಗಿದ್ದರು. ಆಗ ದಮಾಸ್ಕಸ್‍ನಲ್ಲಿ ಮುಅವಿಯ ಎಂಬ ಸರ್ದಾರನು ತಾನೇ ಖಲೀಫ್‍ನೆಂದು ಸಾರಿಕೊಂಡು ಜನರ ಮೇಲೆ ಬಲವಂತವಾಗಿ ಧರ್ಮ ಪ್ರಭುತ್ವವನ್ನು ಹೇರಿದನು.

ಹಜರತ್ ಆಲಿಯವರ ತರುವಾಯ ಅವರ ಮಗ ಪೈಗಂಬರರ ಎರಡನೇ ಮೊಮ್ಮಗ ಇಮಾಮ್ ಹುಸೇನ್ ಖಲೀಫ್ ಪಟ್ಟಕ್ಕೆ ಬರಬೇಕಾಗಿತ್ತು. ಆದರೆ ಮುಅವಿಯಾನ್ ಮಗ ಯಜೀದನು ತಾನೇ ಖಲೀಫ್ ನೆಂದು ಸಾರಿದನು. ಈ ಅನ್ಯಾಯವನ್ನು ಇಮಾಮ್ ಹುಸೇನರು ಪ್ರತಿಭಟಿಸಬೇಕಾಯಿತು. ಆದರೂ ಸಹ ಯಜೀದನ ಪ್ರಭುತ್ವವನ್ನು ಮನ್ನಿಸಲು ನಿರಾಕರಿಸಿದರು.

ಸತ್ಯ-ನ್ಯಾಯಗಳನ್ನು ಕಾಪಾಡುವ ಸಲುವಾಗಿ ಇಮಾಮ್ ಹುಸೇನರು 72 ಜನ ಅನುಯಾಯಿಗಳೊಡನೆ ಯುದ್ಧ ಸಾರಿದರು. ಮೊಹರಂ ತಿಂಗಳ ಹತ್ತನೇ ದಿನ ಕರುಬಲಾ ಎಂಬ ಮರುಭೂಮಿಯ ಮೈದಾನದಲ್ಲಿ ನಡೆದ ‘ತುಮುಲ’ ಯುದ್ಧದಲ್ಲಿ ಇಮಾಮ್ ಹುಸೇನರು ಹುತಾತ್ಮರಾದರು. ಶಾಂತಿ ಮತ್ತು ಧರ್ಮಕ್ಕಾಗಿ ತಮ್ಮನ್ನೆ ಸಮರ್ಪಿಸಿಕೊಂಡು ಹಜರತ್ ಹಸನ್ ಮತ್ತು ಹುಸೇನರ ಪುಣ್ಯ ಸ್ಮರಣೆಯ ನಿಮಿತ್ತ ಈ ಹಬ್ಬ ನಡೆಯುತ್ತದೆ.

ಹತ್ತು ದಿನಗಳವರೆಗೆ ನಡೆಯುವ ಈ ಹಬ್ಬದ ಆಚರಣೆಯು ಹಿಂದೂ ಮುಸ್ಲಿಂ ಬೇಧವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ. ಈ ಹಬ್ಬದಲ್ಲಿ ಬರುವ ಹೆಜ್ಜೆ ಕುಣಿತ, ಮುಳ್ತಾ ಹೆಜ್ಜೆ ಕುಣಿತ, ಮಟಕಿ ಹೆಜ್ಜೆ ಕುಣಿತ, ಮರಗಾಲು ಕುಣಿತ ಮುಂತಾದ ಪ್ರಕಾರದಲ್ಲಿ ಕುಣಿಯುತ್ತಾರೆ. ಇದನ್ನು ಜಾನಪದ ಕಲೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಹಳ್ಳಿಗಳಲ್ಲಿ ಈ ಕುಣಿತಕ್ಕೆ ಅಲಾಯಿ ಹೆಜ್ಜೆ ಕುಣಿತ ಎಂದು ಕರೆಯಲಾಗುತ್ತದೆ.

ಮಹಮ್ಮದ್ ಪೈಗಂಬರ ಮೂರನೇ ಮೊಮ್ಮಗ ಹಜರತ್ ಇಮಾಮ್ ಹುಸೇನರು ಪಡೆದ ದುರಂತ ಸಾವಿನ ಸಂತಾಪ ಸೂಚಿಸು ಈ ಹಬ್ಬದಲ್ಲಿ ಹಸ್ತ ಸಂಕೇತಗಳನ್ನು ಬಳಸಿ ಪೂಜಿಸುತ್ತಾರೆ. ಹಿಂದೂ-ಮುಸ್ಲಿಂರು ಸೆರಿ ಆಚರಿಸುವ ಈ ಹಬ್ಬವನ್ನು ಮೊಹರಂ ದಿನಾಂಕದ ಪ್ರಕಾರ ಹಿಂದೂಗಳು ಅತ್ಯಂತ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಮೊಹರಂ ದಿನಾಂಕ 7,8 ಮತ್ತು 9ರಂದು 3 ದಿನಗಳ ಕಾಲ ಆಲಾಯಿ ಕುಣಿತ, ಮೊಹರಂ ಪದಗಳು ಹಾಡುವುದರ ಮೂಲಕ ಭಾವೈಕ್ಯತೆಯನ್ನು ಸಾರುತ್ತಾರೆ.

ಇವರಾಡುವ ಆಲಾಯಿ ಕುಣಿತ, ಹಾಡುಗಳು ಮತ್ತೇ ಮತ್ತೇ ಕೆಳಬೇಕೆನಿಸುತ್ತದೆ. ದೇವರು ಹಿಡಿಯುವುದು, ಬೆಂಕಿಯಲ್ಲಿ ನಡೆದಾಡುವುದು, ಹಿಂದೂಗಳೆಲ್ಲ ಸೇರಿ ನೈವೆಧ್ಯ ನೀಡುವುದು. ಹರಕೆ ತಿರಿಸುವುದನ್ನು ನೋಡಿದರೆ ಇಲ್ಲಿ ಯಾವುದೇ ಜಾತಿ , ಮತ, ಬೇದವಿಲ್ಲದೆ ಎಲ್ಲರೂ ಕೂಡಿ ಆಚರಿಸಲಾಗುತ್ತದೆ ಎಂಬ ಮಾತು ಮನದಟ್ಟಾಗುತ್ತದೆ. ಮತ್ತು ಕೋಮು ಸಾಮರಸ್ಯಕ್ಕೆ ಇಂತಹ ಸಾಂಸ್ಕøತಿಕ ಉತ್ಸವಗಳು ಸಾಧನವಾಗುತ್ತವೆ ಎಂದು ಹೇಳಬಹುದು.

ಪಿಂಜಾ ಅಥವಾ ದೇವರು ಹೊತ್ತವರಲ್ಲಿ ಭಯ,ಭಕ್ತಿ , ಹೇಳಿಕೆ ಕೇಳಿಕೆಗಳು, ರೈತರಿಗೆ ಭವಿಷ್ಯತ್ತಿನಲ್ಲಿ ಮಳೆ, ಬೆಳೆಯ ಬಗ್ಗೆ, ಸಂತಾನ ಪ್ರಾಪ್ತಿಯ ಬಗ್ಗೆ, ಮನೆತನಗಳ ಸಮಸ್ಯೆ ಪರಿಹಾರಗಳ ಬಗ್ಗೆ ಇನ್ನೂ ಮುಂತಾದ ಪ್ರಶ್ನೆಗಳನ್ನು ಕೇಳಿ ಹರಕೆಯನ್ನು ತೀರಿಸುತ್ತಾರೆ. ಸರ್ವ ಧರ್ಮಿಯರೆಲ್ಲರೂ ಒಗ್ಗೂಡಿ ವಿವಿಧ ಸಂಪ್ರದಾಯ, ಸಂಸ್ಕಾರಗಳೊಂದಿಗೆ ಆಚರಿಸುವ ಹಬ್ಬ ಇದಾಗಿದೆ. ಈ ಹಬ್ಬದಲ್ಲಿ ಪರಸ್ಪರ ಪ್ರೀತಿ, ಉತ್ಸಾಹ, ಹೋಸತನ, ಸಂತೋಷವನ್ನು ಕಾಣಬಹುದು.

ಹಿಂದೂ ಕುಟುಂಬದ ಸದಸ್ಯರು ಮೊಹರಂ ದೇವರ ಹೆಸರಿನಲ್ಲಿ ಪೀರಗಳು ಆಗುತ್ತಾರೆ. ಇವರು ಗ್ರಾಮದ ವಿವಿಧ ಕುಟುಂಬಗಳಿಗೆ ಹೋಗಿ ದವಸ ದಾನ್ಯಗಳನ್ನು ಬೇಡಿ ಜೋಳಿಗೆಯಲ್ಲಿ ಹಾಕಿಸಿಕೊಂಡು ಬರುತ್ತಾರೆ. ಈ ಪೀರ ಆಗುವ ಕಾರ್ಯವನ್ನು ಅಲಾಯಿ ದೇವರು ಹಿಡಿಯುವವರು ನೆರವೇರಿಸುತ್ತಾರೆ. ಗುಲ್ಬರ್ಗಾ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಬರುವ ಅನೇಕ ಹಳ್ಳಿಗಳಲ್ಲಿ ಹಿಂದೂಗಳು ಅಲಾಯಿ ದೇವರು ಹಿಡಿಯುವುದು ಕಂಡು ಬರುತ್ತದೆ.

ಈ ಹಬ್ಬ ಗ್ರಾಮೀಣ ಜೀವನದ ಸಾಂಸ್ಕøತಿಕ ಪ್ರೇರಣೆಯಾಗಿದೆ ಎಂದು ಮತ್ತು ಜಾನಪದ ರಸಿಕತೆಗೂ ಹಿಡಿದ ಕನ್ನಡಿಯಾಗಿದೆ ಎಂದು ಹೇಳಬಹುದು.
ಆದರೆ ಇತ್ತೀಚಿನ ದಿನಗಳಲ್ಲಿ ಈ ಮೊಹರಂ ಹಬ್ಬದ ಸಂಭ್ರಮದಲ್ಲಿ ಸ್ನೇಹ ಸೌಹಾರ್ದತೆ ಮರೆಯಾಗಿ ಕೋಮುಗಲಬೆಗಳು ಹೆಚ್ಚಾಗುತ್ತೀದ್ದು. ಭಯದ ವಾತಾವರಣ ಸೃಷ್ಠಿಯಾಗುತ್ತೀದೆ. ಹಿಂದೂ ಮುಸ್ಲಿಂ ಜನಾಂಗದ ಭಾವೈಕ್ಯತೆಗೆ ಧಕ್ಕೆ ಬರುವಂತಾಗಿದೆ.

ಹಬ್ಬಗಳ ಮೂಲ ಉದ್ದೇಶ ಏನೇ ಇರಲಿ ಅವುಗಳ ಸಾಂಸ್ಕøತಿಕ ಪ್ರಯೋಜನವನ್ನಾಗಲಿ, ಸಮಾಜಿಕ ಸಾರ್ಥಕತೆಯನ್ನಾಗಲಿ ಅಲ್ಲಗಳೆಯುವಂತ್ತಿಲ್ಲ. ಸಮಾಜದಲ್ಲಿ ಐಕ್ಯ ಭಾವನೆ ಕುದುರಲು, ನಾಡಿನಲ್ಲಿ ಶಾಂತಿ ನೆಮ್ಮದಿ ನೆಲೆಗೊಳ್ಳಲು ಹಬ್ಬಗಳು ಅತೀ ಅವಶ್ಯವೆಂದು ಒತ್ತಿಹೇಳಬೇಕಾಗಿಲ್ಲ ಪ್ರತಿಯೊಂದು ಯುಗದ ಜನರು ಆಯಾ ಕಾಲದ ಅಬಿರುಚಿ, ಮನೋಧರ್ಮಗಳಿಗೆ ಅನುಗುಣವಾಗಿ ಅವುಗಳ ರೂಪ ಸ್ವರೂಪಗಳಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ದೈವಾನುಗ್ರಹ ಸಂಪಾದಿಸುವುದರ ಜೋತೆಗೆ ಆಯಾ ಗುಂಪಿನ ಐಕ್ಯತೆಯನ್ನು ಕಾಪಾಡುವುದೇ ಹಬ್ಬಗಳ ಮುಖ್ಯ ಗುರಿಯಾಗಿದೆ.

ರಾಘವೇಂದ್ರ ಹಾರಣಗೇರ. ಉಪನ್ಯಾಸಕರು.ಶಹಾಪುರ.

Related Articles

5 Comments

  1. ಭಾವೈಕ್ಯತೆಯ ಬೆಸುಗೆ ಮೊಹರಂ ಲೇಖನ ಚನ್ನಾಗಿ ಮೂಡಿಬಂದಿದೆ ಸರ್ ಧನ್ಯವಾದಗಳು .

  2. ಮೊಹರಂ ಹಬ್ಬದ ಅಂಗವಾಗಿ ನೀವು ನೀಡಿರುವ ಸಂಗತಿಗಳು ತುಂಬಾ ಚೆನ್ನಾಗಿದೆ ಕೂತುಹಲಕಾರಿಯಾಗಿ ಮುಡಿ ಬಂದಿದೆ. ತುಂಬಾ ಧನ್ಯವಾದಗಳು ಸರ್.

Leave a Reply

Your email address will not be published. Required fields are marked *

Back to top button