
ಶಹಾಪುರಃ ಸಂಭ್ರಮದ ಶರಣಬಸವೇಶ್ವರ ರಥೋತ್ಸವ
yadgiri, ಶಹಾಪುರಃ ನಗರದ ದಿಗ್ಗಿ ಬೇಸ್ ಹತ್ತಿರದ ಅನವಾರ ಪಂಚಕಂತಿ ಮಠದಿಂದ ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀ ಶರಣಬಸವೇಶ್ವರರ ರಥೋತ್ಸವ ಮಂಗಳವಾರ ಸಂಜೆ 6 ಗಂಟೆಗೆ ಸಂಭ್ರಮದಿಂದ ಜರುಗಿತು.
ಕಳೆದೆರಡು ವರ್ಷದಿಂದ ಕೊರೊನಾ ಕಾಟದಿಂದಾಗಿ ರಥೋತ್ಸವ ಸಂಭ್ರಮ ಕಾಣದ ಭಕ್ತಾಧಿಗಳು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪಂಚಕಂತಿ ಮಠದಿಂದ ನಗರದ ಗಾಂಧಿ ಚೌಕ್ ಹತ್ತಿರದ ಗುಗ್ಗಳ ಬಸವೇಶ್ವರ ಮಂದಿರವರೆಗೂ ರಥೋತ್ಸವ ಸಾಗಿ ಮತ್ತೆ ಮೂಲ ಸ್ಳಳ ಶ್ರೀಮಠಕ್ಕೆ ವಾಪಾಸ್ ಆಗಮಿಸುತ್ತದೆ. ಸುಮಾರು ಅರ್ಧ ಕೀ.ಮೀ.ನಷ್ಟು ಉದ್ದ ಸಾಗಿ ಬರುವದು ವಿಶೇಷ.
ರಥೋತ್ಸವ ಸಂದರ್ಭದಲ್ಲಿ ಭಕ್ತಧಿಗಳು ಉತ್ತುತ್ತಿ, ಬಾಳೆಹಣ್ಣು ಎಸೆದು ಕೃತಾರ್ಥರಾದರು. ಬೆಳಗ್ಗೆಯಿಂದಲೇ ನಗರದ ಭಕ್ತಾಧಿಗಳು ಪಂಚಕಂತಿ ಮಠದಲ್ಲಿರುವ ಶ್ರೀಶರಣಬಸವೇಶ್ವರರ ಮೂರ್ತಿಗೆ ನೈವೇದ್ಯ, ಹೂ, ಹಣ್ಣು ಕಾಯಿ ಅರ್ಪಿಸಿ ದರ್ಶನ ಪಡೆದರು. ರಥೋತ್ಸವ ನಿಮಿತ್ತ ಶ್ರೀಮಠ ಸುಣ್ಣ ಬಣ್ಣ ಹಚ್ಚಿ ಸಿಂಗರಿಸಲಾಗಿತ್ತು. ರಥಕ್ಕೂ ಬಣ್ಣ ಬಳಿದು ಹೂವಿನಿಂದ ಸಿಂಗರಿಸಲಾಗಿತ್ತು.