ಶೈಕ್ಷಣಿಕ ಮೂಲ ಸೌಲಭ್ಯ ಕೊರತೆಗೆ ನರೇಗಾದಡಿ ಪರಿಹಾರ – ಇಓ ಬಿರಾದಾರ
ಹೊಸಕೇರಾ ಪ್ರೌಢ ಶಾಲೆಗೆ ಇಓ ಭೇಟಿ
ಹೊಸಕೇರಾ ಪ್ರೌಢ ಶಾಲೆಗೆ ಇಓ ಭೇಟಿ ಪರಿಶೀಲನೆ
ಶೈಕ್ಷಣಿಕ ಮೂಲ ಸೌಲಭ್ಯ ಕೊರತೆಗೆ ನರೇಗಾದಡಿ ಪರಿಹಾರ – ಇಓ ಬಿರಾದಾರ
yadgiri, ಶಹಾಪುರಃ ಸೋಮವಾರ ಸುರಿದ ಮಳೆ ನೀರಿನ ಒತ್ತಡಕ್ಕೆ ತಾಲೂಕಿನ ಹೊಸಕೇರಾ ಗ್ರಾಮದ ಪ್ರೌಢ ಶಾಲೆಯ ಮುಂದಿನ ನಾಲೆಯ ಒಡ್ಡು ಒಡೆದು ಶಾಲಾ ಮಕ್ಕಳ ಸಂಚಾರಕ್ಕೆ ತೊಂದರೆಯಾದ ಹಿನ್ನಲೆ ಮಂಗಳವಾರ ತಾಪಂ ಇಓ ಸೋಮಶೇಖರ ಬಿರಾದಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೊಸಕೇರಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಮುಂದಿನ ನಾಲೆಗೆ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದ ಮಳೆ ನೀರು, ನಾಲೆಗೆ ಹೊಂದಿಕೊಂಡಿದ್ದ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ನೀರಿನ ಒತ್ತಡದಿಂದ ಕುಸಿತಗೊಂಡಿದ್ದು, ಮಕ್ಕಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಕೂಡಲೇ ರಸ್ತೆ ದುರಸ್ತಿ ಕಾರ್ಯ ಮಾಡುವಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗೆ ಇಓ ಬಿರಾದಾರ ಸೂಚಿಸಿದರು.
ಇದೇ ವೇಳೆ ಶಾಲೆಯ ಶಿಕ್ಷಕರ ಹಾಜರಾತಿ ವಹಿ ಪರಿಶೀಲಿಸಿ, ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಕುರಿತು ಶಿಕ್ಷಕರಿಂದ ಮಾಹಿತಿ ಪಡೆದ ಬಳಿಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ. ಶೇ.100ರಷ್ಟು ಫಲಿತಾಂಶ ಬರುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮವಹಿಸಿ ಕೆಲಸ ಮಾಡಬೇಕೆಂದು ತಿಳಿಸಿದರು.
ಮಕ್ಕಳ ಶೈಕ್ಷಣಿಕ ಸವಾರ್ಂಗೀಣ ಅಭಿವೃದ್ಧಿಗೆ ಪೂರಕವಾದ ಶಾಲಾ ಆಟದ ಮೈದಾನ, ಶೌಚಾಲಯ, ಗ್ರಂಥಾಲಯ, ಪ್ರಯೋಗಾಲಯ, ಕುಡಿಯುವ ನೀರು, ಅಡುಗೆ ಕೋಣೆ, ಊಟದ ಕೋಣೆ ಸೇರಿ ಇತರೆ ಅಗತ್ಯ ಮೂಲ ಸೌಕರ್ಯಗಳ ಕೊರತೆ ಇದ್ದರೆ ನರೇಗಾ ಯೋಜನೆಯ ಸಮಗ್ರ ಶಾಲಾ ಅಭಿವೃದ್ಧಿ ಕಾರ್ಯಕ್ರಮದಡಿ ಕಲ್ಪಿಸಲಾಗುತ್ತದೆ. ಮೂಲ ಸೌಕರ್ಯ ಕೊರತೆ ಇದ್ದರೆ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಿ ಎಂದು ಸಲಹೆ ನೀಡಿದರು.
ಮಳೆಗಾಲ ಆರಂಭವಾಗಿದ್ದು, ರೋಗ-ರುಜಿನಗಳು ಬಾರದಂತೆ ಮುಂಜಾಗೃತೆ ವಹಿಸಲು ರಸ್ತೆ, ಚರಂಡಿ ಹಾಗೂ ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡದೆ ಸ್ವಚ್ಛತೆ ಕಾಪಾಡಬೇಕು ಹಾಗೂ ಪ್ರತಿ ಮನೆಯಿಂದ ಸಂಗ್ರಹವಾಗುವ ಕಸವನ್ನು ಗ್ರಾಮ ಪಂಚಾಯಿತಿ ಸ್ವಚ್ಛವಾಹಿನಿ ವಾಹನಕ್ಕೆ ನೀಡುವ ಮೂಲಕ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಈ ವೇಳೆ ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಮಾಲೋಚಕ ಶಿವುಕುಮಾರ, ನರೇಗಾ ಯೋಜನೆ ಐಇಸಿ ಸಂಯೋಜಕ ಬಸಪ್ಪ ಹೋತಪೇಟ, ಗ್ರಾಮ ಪಂಚಾಯಿತಿ ಸದಸ್ಯ ಭೀಮರಾಯ ದೊಡ್ಮನಿ, ಗ್ರಾಮ ಪಂಚಾಯಿತಿ ಸಿಡಿಇಒ ಭೀಮಾಶಂಕರ, ಮಹಾದೇವ, ಅಯ್ಯಣಗೌಡ, ಸಿದ್ರಾಮಪ್ಪ ಕಿಲಾರಿ, ರಡ್ಡೆಪ್ಪ, ಬಂಡಿ ಸಾಹುಕಾರ, ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರು ಇದ್ದರು.