ಬಸವಭಕ್ತಿವಿನಯ ವಿಶೇಷ

ಬ್ರಹ್ಮ ತತ್ವ ಬೋಧಿಸಿದ ಸಂತ ಶರೀಫಜ್ಜ

ಬ್ರಹ್ಮ ತತ್ವ ಬೋಧಿಸಿದ ಸಂತ ಶಿಶುನಾಳ ಶರೀಫರು
(ಜುಲೈ 3 ತತ್ವಪದಕಾರ, ಕವಿ, ಸಂತ, ಶರೀಫಜ್ಜಜರ ಜಯಂತಿ ನಿಮಿತ್ತ ಈ ಲೇಖನ )
……………………………………..
ತತ್ವಪದದ ಮೂಲಕ ಜನಸಾಮಾನ್ಯರ ಬದುಕಿಗೆ ಬೆಳಕನ್ನು ನೀಡಿದ, ಲೋಕಹಿತಕ್ಕಾಗಿ ಬದುಕಿದ, ಹಿಂದೂ, ಮುಸ್ಲಿಂ ಸಾಮರಸ್ಯದ ತಾತ್ವಿಕ ಭೂಮಿಕೆಯನ್ನು ಪಸರಿಸಿದ ಮಹಾಸಂತ, ಹೊಸಗನ್ನಡ ಅರುಣೋದಯ ಸಾಹಿತ್ಯದ ಮುಬೆಳಗಿನ ಕಾಲದಲ್ಲಿ ತಮ್ಮ ಅನುಭವ ಕಾವ್ಯದಿಂದ ಪ್ರಸಿದ್ಧಿ ಪಡೆದಕವಿ, ಬಹುರೂಪಿ, ಕನ್ನಡ ಸಂಸ್ಕೃತಿ ಯು ಆಧ್ಯಾತ್ಮಿಕ ಪರಂಪರೆಯ ಸರ್ವಸಮನ್ನಯ,ಅನುಭಾವ ಸಂಪತ್ತನ್ನು ಅರಗಿಸಿಕೊಂಡು, ಜಾತಿ, ಮಾತು, ಧರ್ಮ ಬದಿಗೊತ್ತಿ ಕನ್ನಡ ನಾಡಿನಲ್ಲಿ ಜನಮನ ಗೆದ್ದವರು ಶಿಶುನಾಳ ಶರೀಫ ಸಾಹೇಬರು.

ಉತ್ತರ ಭಾರತದ ಮಹಾತ್ಮ ಕಬೀರ್ ರಂತೆ ಉತ್ತರ ಕರ್ನಾಟಕದಲ್ಲಿ ಸರ್ವಧರ್ಮ ಸಮನ್ವಯ ವಾದುದು ಉಜ್ವಲ ಮೂರ್ತಿಯಾಗಿ ಬಹುತ್ವ ಬೋಧನೆಯ ಲೋಕಶಿಕ್ಷಕನಾಗಿ ಬಾಳಿದರು.ಅವರ ತತ್ಪಪದದಲ್ಲಿ ಬರುವಂತೆ ನಲ್ಪತ್ತಾರು ಸಾವಿರಕ್ಕೂ ಹೆಚ್ಚು ಊರುಗಳು ಸಂಚರಿಸಿ, ಜನತೆಗೆ ಬದುಕಿನ ಮಾರ್ಗವನ್ನು ತಿಳಿಸಿದ ದೈವಭಕ್ತ, ಸಂತ, ಜ್ಞಾನಿ, ಕವಿ, ಸಮಾಜ ಸುಧಾರಕ, ವಿಚಾರವಾದಿ ಎಂಬುದು ಅವರು ರಚಿಸಿದ ಕಾವ್ಯದಿಂದ ತಿಳಿಯುತ್ತದೆ. ಅವರು ಭಕ್ತಿ ಸಾಧನೆಯೇ ಜೀವನದ ಏಕಮಾತ್ರ ಉದ್ದೇಶ ವೆಂದು ತಿಳಿದಿದ್ದರು. ಎಲ್ಲಾ ಪಂಥಗಳು ಹೇಳುವುದು ಬಹುತತ್ವವೆಂದು ಅನುಭವದಿಂದಲೇ ಮನಗಂಡಿದ್ದರು.

ಶರೀಫರ ಜನನ:
………………………………………
ಶಿಶುನಾಳ ಶರೀಫರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ‘ಶಿಶುವಿನಾಳ್’ ಗ್ರಾಮದಲ್ಲಿ ಮಾರ್ಚ.7–1819 ರಂದು ಜನಿಸಿದರು.ತಂದೆ,ದೇಶಕಾಲ ಮನೆತನದ ಇಮಾಮ್ ಹಜರತ್ ಸಾಹೇಬ್. ತಾಯಿ,ಹಜ್ಜುಮಾ. ಇವರು ಪೂರ್ಣ ಹೆಸರು ಮಹಮ್ಮದ್ ಶರೀಫ್.

ಶಿಕ್ಷಕರಾಗಿದ್ದ ಶರೀಫ.
………………………………………
ಮುಲ್ಕಿ ಪರೀಕ್ಷೆ ಪಾಸು ಮಾಡಿದ ಬಳಿಕ ಶರೀಫರು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರೆಂದು ಕೆಲಸ ಮಾಡಿದರು. ಅವರು ಕನ್ನಡ,ಮರಾಠಿ, ಹಾಗೂ ಉರ್ದು ಭಾಷೆಗಳನ್ನು ಬಲ್ಲವರಾಗಿದ್ದರು. ಲೋಕಶಿಕ್ಷಕನಾಗಲು ದೃವ ಬಯಸ್ಸಿತ್ತೆಂದು ತೋರುತ್ತದೆ.ಹೀಗಾಗಿ ಶಿಕ್ಷಕ ಕೆಲಸವನ್ನು ಬಿಟ್ಟರು.

ಶರೀಫರ ವಿವಾಹ:
……………………………….
ಶಿಕ್ಷಕ ಕೆಲಸವನ್ನು ಬಿಟ್ಟು ಆಧ್ಯಾತ್ಮ ಚಿಂತನೆಯಲ್ಲಿ ತೊಡಗಿಕೊಂಡಿದ್ದರಿಂದ ಶರೀಫರು ತಂದೆ,ತಾಯಿಗೆ ಚಿಂತೆಯಾಗಿ ಈತನನ್ನು ಸಂಸಾರದಲ್ಲಿ ಯೇ ಕಟ್ಟಿಹಾಕಲು ಕುಂದಗೋಳದ ‘ಫಾತಿಮಾ’ ಎಂಬ ಕನ್ನೆಯೊಂದಿಗೆ ವಿವಾಹ ಮಾಡಿದರು.

ನಂತರ ಶರೀಫರಿಗೆ ಒಂದು ಹೆಣ್ಣು ಮಗು ಜನಿಸಿತು. ದುರ್ದೈವದಿಂದ ಕೆಲವು ತಿಂಗಳುಗಳಲ್ಲಿ ಹೆಂಡತಿ ಫಾತಿಮಾ ತೀರಿಕೊಂಡಳು. ಇದರಿಂದ ಶರೀಫರಿಗೆ ಜೀವನದಲ್ಲಿ ಬೇಸರವಾದರೂ, ದೇವರು ನಂಬಿಕೆ ಉಳಿದಿತ್ತು. ನಂತರ ಮಗಳು, ತಂದೆ, ತಾಯಿ ನಿಧನರಾದರು. ತಮ್ಮ ಜೀವನವನ್ನು ಆಧ್ಯಾತ್ಮ ಸಾಧನೆಗೆ ಮುಡಿಪಾಗಿಟ್ಟರು.

ಬೆನ್ನು ಹತ್ತಿದ ಬಡತನ:
………………………………………
ಶರೀಫರು ವರಕವಿ, ಆದರೆ,ಲೋಕದ ಬಾಳುವೆ ಬಂಗಾರವೇನೂ ಆಗಿರಲಿಲ್ಲ. ಬಡತನ ಬೆನ್ನನ್ನು ಸುತ್ತುತ್ತಲೇ ಇತ್ತು.ಒಂದು ಘಟ್ಟದಲ್ಲಿ ಅವರಿಗೆ ತುತ್ತು ಅನ್ನ ತಿನ್ನೋಕೆ ಸಿಗದೇ ಹೋಯಿತು. ಶರೀಫರು ಸಾಲಗಾರರಿಂದ ಮುಕ್ತರಾಗಲು ತಮ್ಮ ಹೊಲ,ಮನೆ,ಶಿಶುವಿನಾಳ್ ಗ್ರಾಮದಲ್ಲಿ ದ್ದ ಎರಡು ಎಕರೆ ಇಪ್ಪತ್ತು ಗುಂಟೆ ಹೊಲವನ್ನು 1888ರ ಆಗಸ್ಟ್ ತಿಂಗಳಲ್ಲಿ 200 ರೂಪಾಯಿಗಳಿಗೆ ಮಾರಾಟ ಮಾಡಿ ಎಲ್ಲದರಿಂದ ಋಣ ಮುಕ್ತ ರಾದರು.

ಗುರುವಿಗಾಗಿ ಹುಡುಕಾಟ:
………………………………………
ಪತ್ನಿ,ಮಗಳು,ತಂದೆ,ತಾಯಿ ಹಾಗೂ ಆಸ್ತಿಯನ್ನು ಕಳೆದುಕೊಂಡು ಶರೀಫರು ಗುರುವಿನ ಹುಡುಕಾಟದಲ್ಲಿ ದ್ದ ಇವರಿಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ’ಕಳಸ’ ಎಂಬ ಗ್ರಾಮದಲ್ಲಿ ಗೋವಿಂದ ಭಟ್ಟರ ಸಂಪರ್ಕ ಬೆಳೆಯಿತು. ಯಾವುದೇ ಮತ, ಪಂಥ, ಹಾಗೂ ಧರ್ಮದ, ಮೂಢನಂಬಿಕೆಯಿಲ್ಲದ ಈ ಗುರುಗಳು ಶರೀಫರಿಗೆ ಮೆಚ್ಚುಗೆ ಯಾದರು.

ಶರೀಫರು ಹಾಡುಗಳನ್ನು ರಚಿಸಿ ಹಾಡಿದರು.
ಗೋವಿಂದ ಭಟ್ಟರು ಸ್ಮಾರ್ತ ಬ್ರಾಹ್ಮಣರು, ಶುದ್ದಿ ಆಧ್ಯಾತ್ಮ ಜೀವಿ, ಶರೀಫರನ್ನು ಕಂಡು ಗುರು ಗೋವಿಂದ ಭಟ್ಟರು ಶಿಷ್ಯನನ್ನಾಗಿ ಮಾಡಿಕೊಂಡು ಗುರುಪದೇಶ ನೀಡಿದರು. ಇಬ್ಬರೂ ತುಂಬಾ ಅನ್ಯೋನ್ಯರಾದರು.

ಆ ಕಾಲದಲ್ಲಿ ಬ್ರಾಹ್ಮಣ- ಮುಸ್ಲಿಂ ಎಂಬ ಭೇದ ಸಮಾಜದಲ್ಲಿ ಹೆಚ್ಚಾಗಿತ್ತು. ಬ್ರಾಹ್ಮಣರು ಗೋವಿಂದ ಭಟ್ಟರಿಗೆ ಸಮಾಜದಿಂದ ಬಹಿಷ್ಕಾರ ಹಾಕುವ ಬೆದರಿಕೆ ಹಾಕಿದರೆ,ಇತ್ತು ಖತೀಬಾ,ಮುಲ್ಲಾ, ಮೌಲ್ಪಿಗಳಿಗೆ ಸರಿಕಾಣಲಿಲ್ಲ.ಆದರೆ ಇವರಿಬ್ಬರೂ ತಮ್ಮದೇ ಹಾದಿಯನ್ನು ಹಿಡಿದು ನಡೆದೇ ನಡೆದರು.

‘ನನ್ನೊಳಗೆ ನಾ ತಿಳಕೊಂಡೆ ಎನಗೆ ಬೇಕಾದ ಗಂಡನ್ನ ಮಾಡಿಕೊಂಡೆ’ ಎಂದು ಶರೀಫರು ತಮ್ಮ ತತ್ಪಪದದಲ್ಲಿ ಹೇಳಿಕೊಂಡು ಕೊನೆಗೆ ಗುರು ಗೋವಿಂದನ ಪಾದ ಹಿಡಕೊಂಡೆ ಎಂದು ಸ್ಮರಿಸಿದ್ದಾರೆ. ಗುರುಗೋವಿದರು ಉಪನಿಷತ್ತುಗಳು ಸಾರವನ್ನು ಶರೀಫರಿಗೆ ತಿಳಿಸಿಕೊಟ್ಟರು.’ಕೊನೆಗೆ ಗುರು ಗೋವಿಂದ ಭಟ್ಟರ ನ್ನು ಕಳೆದುಕೊಂಡ ಮೇಲೆ ಸಹಜವಾಗಿ ಅವರ ಚಿತ್ತ ಕದಡಿತು.

ಶರೀಫರ ಮೇಲೆ ಪ್ರಭಾವ:
…………………………………….
ಗುರು ಗೋವಿಂದ ಭಟ್ಟರು ನಿಧನದ ನಂತರ ಶರೀಫರು ಆತ್ಮ ಶಾಂತಿಗಾಗಿ ಕ್ಷೇತ್ರ ದರ್ಶನ ಪಡೆಯಲು ಹೊರಟರು.ಶಿರಹಟ್ಟಿ ಫಕೀರಸ್ವಾಮಿ, ಮೈಲಾರ ಮಹಾದೇವ, ಸವದತ್ತಿ ಯಲ್ಲಮ್ಮ,ಉಳವಿ ಚನ್ನಬಸವಣ್ಣ ನಾ ದರ್ಶನ ಹಾಗೂ ಚಿದಂಬರ ದೀಕ್ಷಿತರು, ಬಾಲಲೀಲಾ ಮಹಾಂತಶಿವಯೋಗಿ, ಗುಡಗೇರಿಯ ಸಂಗಮೇಶ್ವರ, ಅಂಕಲಗಿ ಅಡವಿಸ್ಪಾಮಿಗಳು, ಗದುಗಿನ ಶಿವಾನಂದರು,ಅಪರಾಧಿ ಫಲಾಹಾರ ಸ್ಪಾಮಿಗಳು, ಮುಂತಾದ ಸಾಧು, ಸಂತರನ್ನು ಕಂಡರು. ಗರಗದ ಮಡಿವಾಳಪ್ಪ, ನವಲುಗುಂದ ನಾಗಲಿಂಗಪ್ಪ, ಹುಬ್ಬಳ್ಳಿ ಸಿದ್ದಾರೂಢ ಮುಂತಾದವರು ಸಾನ್ನಿಧ್ಯ, ಸಂಸರ್ಗಗಳಿಂದ ಅನಭಾವಿಯಾಗಿ ಮಾಗಿದರು.

ಜನಮೆಚ್ಚಿದ ತತ್ವಪದಗಳು:
………………………………………
ಶರೀಫರ ತತ್ವಪದ ಗಳಲ್ಲಿ ಸಮಾಜ ತಿದ್ದುವ ಕಾರ್ಯವಿದೆ. ಗುಡಿಯ ನೋಡಿರಣ್ಣಾ ದೇಹದ ಗುಡಿಯ, ಅಳಬೇಡಾ ತಂಗಿ ಅಳಬೇಡಾ, ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ, ಮೋಹದ ಹೆಂಡತಿ ತೀರಿದ ಬಳಿಕ, ಹಾವು ತುಳಿದೆನೆ ಮಾಲಿನಿ, ಸೋರುತಿಹುದು ಮನೆಯ ಮಾಳಿಗೆ, ಎಂಥಾ ಮೋಜಿನ ಕುದುರಿ, ಎಲ್ಲರಂಥವನಲ್ಲ ನನಗಂಡ, ಕೋಡುಗನ್ನ ಕೋಳಿ ನುಂಗಿತ್ತಾ ನೋಡವ್ವ ತಂಗಿ ಇತ್ಯಾದಿ ಜನ ಮೆಚ್ಚಿದ ತತ್ವಪದಗಳಾಗಿವೆ.

ಶರೀಫರು ಹಲವು ಪ್ರಕಾರಗಳಲ್ಲಿ ಪದ್ಯಗಳನ್ನು ರಚಿಸಿದರು.ಅವರ ಕಾವ್ಯ ವೈವಿಧ್ಯಮಯ. ಶರೀಫರು ಜೀವನದ ನಿತ್ಯ ಘಟನೆಗಳನ್ನೇ ವಸ್ತುವಾಗಿ ಆರಿಸಿಕೊಂಡು ಆಧ್ಯಾತ್ಮ ನಡೆಯ ಮಾರ್ಗಗಳನ್ನು ನಿರೂಪಿಸಿದರು.

ಸರ್ವಧರ್ಮ ಸಮನ್ವಯತೆ:
………………………………………
ತಮ್ಮ ಜೀವನದುದ್ದಕ್ಕೂ ಇವರು ಬರೆದ ಹಾಡು, ಒರೆದಪಾಡು ಒಂದೇ ಆಗಿದೆ. ಬೋಧ ಒಂದೇ, ಬ್ರಹ್ಮ ನಾದ ಒಂದೇ ಎಂಬುದು ಅವರ ಬೀಜ ಮಂತ್ರವಾಗಿದೆ.ಅವರ ದೃಷ್ಟಿಯಲ್ಲಿ ಸನಾತನ ವೈದಿಕ ಧರ್ಮ ಎತ್ತಿ ಹಿಡಿಯುವ ಬ್ರಹ್ಮ ತತ್ವ, ತಮ್ಮ ಪರಿಸರದಲ್ಲಿ ಪ್ರಭಾವಕಾರಿಯಾಗಿದ್ದ ವೀರಶೈವ ಮುಂತಾದ ಲಿಂಗತತ್ವ ,ಹಾಗೂ ತಮ್ಮ ಮನೆತನಕ್ಕೆ ಪೂಜ್ಯರಾಗಿದ್ದ ಹುಲಗೂರು ಖಾದರಸಾ ಸಾಧುವಿನ ಸಮಾಧಿತತ್ವ, ಇವೆಲ್ಲವೂ ಮೂಲತಃ ಒಂದೇ..

ಇದರಿಂದಾಗಿ ಇವರು ಸರ್ವಧರ್ಮ ಸಮನ್ವಯ ವಾದ, ಉಜ್ವಲ ಮೂರ್ತಿಯಾಗಿ ಹಿಂದೂ, ಮುಸ್ಲಿಂ ಬಾಂಧವ್ಯದ ಧವಲಕೀರ್ತಿಯಾಗಿ ಜನಮನ ಗೆದ್ದರು.

ವಚನಶಾಸ್ತ್ರ ತಿಳಿದ ಶರೀಫರು:
………………………………………
ಶರೀಫರು ಚಿಕ್ಕಂದಿನಿಂದ ತಮ್ಮೂರಿನ ಹಿರೇಮಠದ ಸಿದ್ದರಾಮಯ್ಯ ಎಂಬ ವೀರಶೈವ ಪಂಡಿತರಿಂದ ವೀರಶೈವ ಧರ್ಮ ದ ಮರ್ಮವನ್ನು ತಿಳಿದಿದ್ದರು. ಅವರು ಬಸವಣ್ಣ ಮತ್ತು ಅಲ್ಲಮ ಪ್ರಭುಗಳ ವಚನಗಳಿಗೆ ಮಾರು ಹೋಗಿದ್ದರು. ಅವರೊಂದು ಕಡೆ ಬಸವಣ್ಣನಂತಹ ಭಕ್ತನಿಲ್ಲ.. ಪ್ರಭುದೇವರಂಥ ಪರಮಾತ್ಮನಿಲ್ಲ ಎಂದು ಮನದುಂಬಿ ಹಾಡಿದ್ದಾರೆ.

“ಮಣ್ಣು ಬಿಟ್ಟು ಮಡಕೆಯಿಲ್ಲ..ತನ್ನ ಬಿಟ್ಟು ದೇವರಿಲ್ಲ” ಎಂದು ಬಲು ಸೂಕ್ಷ್ಮ ವಾಗಿ ಹೇಳಿದ ಶರೀಫರು, ಭಕ್ತಿಯಿಂದ ಜ್ಞಾನ, ಜ್ಞಾನದಿಂದ ವಿರಕ್ತಿ, ವಿರಕ್ತಿ ಯಿಂದ ಮುಕ್ತಿ ಎಂದು ಸಾರಿದ ಮಹಾನ್ ಪುರುಷ ಇವರು.

ತಮ್ಮ ಹಾಡುಗಳಿಗೆ ‘ಶಿಶುನಾಳಧೀಶ’ ಎಂಬ ಅಂಕಿತ ನೀಡಿದ್ದಾರೆ. ಇದು ಶಿಶುವಿನಾಳ ಗ್ರಾಮದ ಬಯಲು ಗುಡಿಯ ಸ್ತಂಭ ಮೂರ್ತಿ ಬಸವಣ್ಣ.ಇದು ಊರಿನ ಜಾಗ್ರತಿ ದೇವತೆ.

ಲೋಕ ಹಿತಕ್ಕಾಗಿ ಬದುಕಿದರು:
………………………………………
ಶರೀಫರು ಲೋಕದ ಹಿತಕ್ಕಾಗಿ ಬದುಕಿದರು.ಅವರ ಅಂತರಂಗ-ಬಹಿರಂಗಗಳೆರಡು ಬ್ರಹ್ಮ ಧ್ಯಾನದಲ್ಲಿಯೇ ಇರುತ್ತಿದ್ದವು.ಆ ಮೂಲಕ ಪಾರಮಾರ್ಥಿಕ ಸಾಧನೆಯನ್ನು ತೋರಿದರು. ಸಮಾಜದಲ್ಲಿ ನಡೆಯುತ್ತಿದ್ದ ಅನೀತಿ, ಮೋಸ, ವಂಚನೆ, ಕಪಟತನ, ಬಹಿರಂಗ ಆಡಂಬರ, ಅಂಧ ಶ್ರದ್ಧೆ, ಶೋಷಣೆ ಇವುಗಳನ್ನು ಕಂಡು ಕಟುವಾಗಿ ವಿರೋಧಿಸಿದರು.

ಉಚ್ಚ-ನೀಚ,ಕುಲ-ಗೋತ್ರ ಇತ್ಯಾದಿ ಎಲ್ಲ ಬಗೆಯ ಭೇದಗಳನ್ನು ತ್ಯಜಿಸಬೇಕೆಂದು ಸಾರಿದರು. ಸರಳತೆಯೇ ದೈವಿಭಾವಗಳನ್ನು ತಂದು ಕೊಡುತ್ತದೆಂದೂ, ಬ್ರಹ್ಮಾನಂದಕ್ಕೆ ಇಂದು ಮೆಟ್ಟಿಲೆಂದು ಸಾರಿದರು. ಅವರು ತಮ್ಮ ಶಿಷ್ಯರನ್ನು ಕರೆದು ‘ಬಿಡತೇನಿ ದೇಹ ಬಿಡತೇನಿ’ಎಂದು ಹಾಡುತ್ತಾ ತಮ್ಮ ಎಪ್ಪತ್ತನೆಯ ವಯಸ್ಸಿನಲ್ಲಿ ಶಿಷ್ಯರ ಸಮ್ಮುಖದಲ್ಲೇ ದೇಹವನ್ನು ತ್ಯಜಿಸಿದರು. ಶಿವಯೋಗದಲ್ಲಿ ತಮ್ಮ ನಿಲುವನ್ನು ಇರಿಸಿ ಓಂಕಾರದ ಪ್ರಭೆಯಲ್ಲಿ ಅವರು ಬಯಲಾದರು..

ಡಾ.ಗಂಗಾಧರಯ್ಯ ಹಿರೇಮಠ
ಪ್ರಾಧ್ಯಾಪಕರು, ಸ.ಪ್ರ.ದ.ಮಹಿಳಾ ಕಾಲೇಜು, ದಾವಣಗೆರೆ.

Related Articles

Leave a Reply

Your email address will not be published. Required fields are marked *

Back to top button